ಹಾಸನ: ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗರಂ ಆಗಿದ್ದು ಡೀಮ್ಡ್ ಫಾರೆಸ್ಟ್‌ನಲ್ಲಿ ಸ್ಥಗಿತಗೊಳಿಸಲಾಗಿದ್ದ ಕಲ್ಲುಗಣಿಗಾರಿಕೆಗೆ ಮರುಚಾಲನೆಗೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಚನ್ನರಾಯಪಟ್ಟಣ ಮತ್ತು ಅರಕಲಗೂಡು ತಾಲೂಕುಗಳಲ್ಲಿ ಡೀಮ್ಡ್ ಅರಣ್ಯದಲ್ಲಿ ಸ್ಥಗಿತವಾಗಿದ್ದ ಗಣಿಗಾರಿಕೆ ಮತ್ತೆ ಆರಂಭವಾಗಿದೆ. ಈ ಬಗ್ಗೆ 19-8-24 ರಂದು ಸೂಚನೆ ನೀಡಿದರೂ ಕ್ರಮ ಆಗಿಲ್ಲ ಎಂದು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ಹಾಸನ ವೃತ್ತದ ಸಿಸಿಎಫ್, ಡಿಸಿಎಫ್ ಸೇರಿ ಅರಣ್ಯ ಟಾಸ್ಕ್‌ಫೋರ್ಸ್‌ನಲ್ಲಿ ಗಣಿಗಾರಿಕೆಗೆ ಅನುಮೋದನೆ ನೀಡಿದ ಎಲ್ಲರ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷೆನ್ 3B ಹಾಗೂ ರೂಲ್ 9 ರಡಿ ಅನುಮತಿ ಪಡೆದು ಕೇಸ್ ದಾಖಲಿಸಲು ಸೂಚಿಸಿದ್ದು, ಸಿಸಿಎಫ್, ಡಿಸಿಎಫ್ ಹಾಗೂ ಅನುಮತಿ ನೀಡಿರುವ ಎಲ್ಲಾ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಅನುಮೋದನೆ ನೀಡಿದ ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಅರಕಲಗೂಡು ಹಾಗೂ ಚನ್ನರಾಯಪಟ್ಟಣದಲ್ಲಿ ಡೀಮ್ಡ್ ಫಾರೆಸ್ಟ್‌ನಲ್ಲಿ ಗಣಿಗಾರಿಕೆ ತಡೆಯದ ಅಧಿಕಾರಿಗಳ ನಡೆಗೆ ಅರಣ್ಯ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಗಣಿಗಾರಿಕೆ ಸ್ಥಳದಲ್ಲಿ ಆಗಿರುವ ಹಾನಿ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಎಪಿಸಿಸಿಎಫ್ ಮಟ್ಟದ ಅಧಿಕಾರಿ ನಿಯೋಜಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಈ ಹಿಂದೆ ಕೂಡ ಡೀಮ್ಡ್ ಫಾರೆಸ್ಟ್‌ನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ ಆರೋಪದಲ್ಲಿ ಓರ್ವ ಡಿಸಿಎಫ್ ಅಮಾನತು ಮಾಡಿದ್ದ ಸಚಿವರ ನಡೆಯನ್ನು ಸ್ಮರಿಸಬಹುದಾಗಿದ್ದು, ಜಿಲ್ಲೆಯ ಹಲವು ಅಧಿಕಾರಿಗಳು ಈಗ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.