ಹಾಸನದಲ್ಲಿ ಸರಣಿ ಅಪಘಾತ ಎಸಗಿ ಪರಾರಿಯಾದ ಹೋಂಡಾ ಸಿಟಿ ಕಾರು; ಐದು ವಾಹನಗಳು ಜಖಂ

ನವ ವಧು-ವರರ ಫೋಟೋ ಅಂಟಿಸಿಕೊಂಡಿದ್ದ ಕಾರನ್ನು ಹೈಸ್ಕೂಲ್ ಮೈದಾನದಲ್ಲಿ ಬಿಟ್ಟು ಹೋಗಿರುವ ಚಾಲಕ

ಹಾಸನ: ಅಡ್ಡಾದಿಡ್ಡಿಯಾಗಿ ಚಲಿಸಿದ ಹೋಂಡಾ ಸಿಟಿ ಕಾರೊಂದು ಸರಣಿ ಅಪಘಾತ ನಡೆಸಿರುವ ಘಟನೆ ನಗರದ ಬಸಟ್ಟಿಕೊಪ್ಪಲಿನಲ್ಲಿ ಇಂದು ರಾತ್ರಿ ನಡೆದಿದೆ.

ಗೋಕುಲ್ ಹೋಟೆಲ್ ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದು ಕಾರು, ಒಂದು ಆಟೋ, ಎರಡು ಬೈಕ್‌ಗಳು ಜಖಂಗೊಂಡಿದ್ದು, ಭಾರಿ ಅನಾಹುತ ತಪ್ಪಿದ್ದು ಯಾರೂ ಗಾಯಗೊಂಡಿಲ್ಲ.

ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಪರಾರಿಯಾಗಿದ್ದ ಚಾಲಕ ನಂತರ ಹೈಸ್ಕೂಲ್ ಫೀಲ್ಡ್‌ನಲ್ಲಿ ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದಾನೆ.

MH-02-BM-4505 ನಂಬರ್‌ನ ಕಾರು ಕಾರಿನ ಹಿಂಬದಿ ಗಾಜಿನ ಮೇಲೆ ನವ ವಧು-ವರನ ಫೋಟೋ ಅಂಟಿಸಿದ್ದು, ಮದುವೆಗೆ ಬಂದಿರುವ ಬೆಂಗಳೂರು ಮೂಲದವರ ಕಾರು ಇದು ಎನ್ನಲಾಗುತ್ತಿದೆ.

ಬಸಟ್ಟಿಕೊಪ್ಪಲಿನಲ್ಲಿರುವ ಬಟ್ಟೆ ಅಂಗಡಿಯಲ್ಲಿ ವಸ್ತ್ರ ಖರೀದಿಸಿರುವ ಬಿಲ್ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಸಿಕ್ಕಿದೆ.

ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರು ವಶಕ್ಕೆ ಪಡೆದರು. ಜಖಂಗೊಂಡಿರುವ ವಾಹನಗಳ ಮಾಲೀಕರೂ ಪೊಲೀಸರ ಮೊರೆ ಹೋಗಿದ್ದಾರೆ.