ಮಾಧವ್ ಗಾಡ್ಗೀಳ್ ವರದಿ ಅನುಷ್ಠಾನಗೊಳಿಸಿ; ಹಸಿರುಭೂಮಿ ಪ್ರತಿಷ್ಠಾನದಿಂದ ಮನವಿ

ಹಾಸನ : ಪರಿಸರ ತಜ್ಞ ಪ್ರೊ.ಮಾಧವ್‌ ಗಾಡ್ಗಿಳ್‌ ವರದಿ ಅನುಷ್ಟಾನದ ಮೂಲಕ ಪಶ್ಚಿಮಘಟ್ಟ ರಕ್ಷಿಸಬೇಕೆಂದು ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಕೇರಳದ ವಯನಾಡು, ಶಿರೂರು ಗುಡ್ಡ ಹಾಗು ಶಿರಾಡಿಘಾಟ್‌ನಲ್ಲಿ ಭೂ ಕುಸಿತಕ್ಕೆ ಅಭಿವೃದ್ಧಿ ಹೆಸರಿನ ಯೋಜನೆಗಳೇ ಕಾರಣ. ರಾತ್ರಿ ಕಳೆದು ಬೆಳಗಾಗುವುದರೊಳಗೆ ನೂರಾರು ಜನರ ಬಾಳು ಬೀದಿಗೆ ಬಂದಿದ್ದು, ಆಸ್ತಿ-ಪಾಸ್ತಿ ಕೊಚ್ಚಿ ಹೋಗಿದೆ. ಅಪಾರ ಪ್ರಮಾಣದ ನಷ್ಟ ಉಂಟಾಗಿರುವುದಕ್ಕೆ ಮನುಷ್ಯನೇ ಕಾರಣನಾಗಿದ್ದಾನೆ. ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವವನ್ನು ಅರಿತು ಪ್ರೊ.ಮಾಧವ್‌ ಗಾಡ್ಗಿಳ್‌ ಸಮಿತಿಯು 2011ರಲ್ಲಿ ಸಲ್ಲಿಸಿದ ವರದಿಯನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು.

ಪರಿಸರಕ್ಕೆ ಹಾನಿ ಮಾಡುವಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಶಿಫಾರಸು ಮಾಡಿದ್ದ ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್‌.ಪಿ.ವೆಂಕಟೇಶ್‌ಮೂರ್ತಿ, ಖಜಾಂಚಿ ಎಂ.ಬಿ. ಗಿರಿಜಾಬಿಕಾ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಟ್ರಸ್ಟಿಗಳಾದ ಶಿವಶಂಕರಪ್ಪ, ಪುರುಷೋತ್ತಮ್‌‍, ಡಾ. ಮಂಜುನಾಥ್‌, ಚ.ನ.ಅಶೋಕ್‌, ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್‌, ದಿನೇಶ್‌ ಕುಮಾರ್‌, ಸಚಿನ್‌, ಸೈಯದ್‌ ತಾಜಾ ಇತರರಿದ್ದರು.