ಅರಮನೆಯಲ್ಲಿ ಅರ್ಜುನನ ಅಸ್ಥಿಪಂಜರ ಪ್ರದರ್ಶನಕ್ಕಿಡಬೇಕು, ಕಾಡಾನೆಗಳ ಸಾವಿನ ಕಾರಣಗಳು ತನಿಖೆಯಾಗಬೇಕು: ಹುರುಡಿ ವಿಕ್ರಂ ಆಗ್ರಹ

ಹಾಸನ: ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ  ಅನೇಕ ಆನೆಗಳು ಸಾವನಪ್ಪಿದ್ದು, ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಪರಿಸರ ಹಾಗೂ ವನ್ಯಜೀವಿ ಪರ ಹೋರಾಟಗಾರ ಹುರುಡಿ ವಿಕ್ರಂ ಆಗ್ರಹಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆನೆ ಅರ್ಜುನ ಸತ್ತು 1 ವರ್ಷವಾಗಿದ್ದರೂ, ಇದುವರೆಗೂ ಸಾವಿನ ಕಾರಣದ ಬಗ್ಗೆ ನಿಖರ ವರದಿ ಕೊಟ್ಟಿಲ್ಲ ಎಂದು ದೂರಿದರು. ಅರ್ಜುನ ಆನೆಯ ಅಸ್ಥಿಪಂಜರವನ್ನು ಸಂಗ್ರಹಿಸಿ ಆನೆ ದೇಹಾಕೃತಿ ಮಾದರಿಯಲ್ಲೇ ಜೋಡಿಸಿ ಮೈಸೂರು ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಬೇಕು ಹಾಗೂ ಭೀಮ ಆನೆ ದಾಳಿಯಿಂದ ಸಾವನಪ್ಪಿದ ಶಾರ್ಪ್ ಶೂಟರ್ ವೆಂಕಟೇಶ್‌ಗೆ ಮರಣೋತ್ತರ ಪ್ರಶಸ್ತಿ ನೀಡಿ ಅವರ ಮಗನಿಗೆ ಸರಕಾರಿ ಹುದ್ದೆ ಕೊಡಬೇಕೆಂದು ಒತ್ತಾಯಿಸಿದರು.

ಕಳೆದ ಒಂದು ವಾರದ ಹಿಂದೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿಯಲ್ಲಿ ಸಾವನಪ್ಪಿದ ಹೆಣ್ಣು ಆನೆ ಸಾವು ಆಕಸ್ಮಿಕವಲ್ಲ. ಅದಕ್ಕೂ ಒಂದು ವಾರ ಮುಂಚೆಯಿಂದಲೂ ಅದು ಅನಾರೋಗ್ಯದಿಂದ ನೆರಳುತ್ತಿದ್ದು. ಆದರೆ ಅರಣ್ಯ ಇಲಾಖೆಯವರು ತುರ್ತು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದೇ ಆನೆಯ ಸಾವಿಗೆ ಕಾರಣ ಎಂದು ದೂರಿದರು.

ಹೆಣ್ಣಾನೆ ಸಾವಿನ ಬಗ್ಗೆಯೂ ನಿಖರವಾದ ತನಿಖೆ ನಡೆಸಿ
ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಯಸಳೂರು ಅರಣ್ಯ ವಲಯಕ್ಕೆ ಸೇರಿರುವ ಹಳ್ಳಿಗಳ ಬಳಿ
ಆನೆಗಳು ಸತ್ತಿವೆ. ಒಟ್ಟು 4 ಹೆಣ್ಣಾನೆ, 5 ಗಂಡಾನೆಗಳು ಕೊನೆಯುಸಿರೆಳೆದಿವೆ. ಗಂಡಾನೆಗಳು ದಂತಚೋರರ ದುರಾಸೆಗೆ ಗುಂಡೇಟಿಗೆ ಬಲಿಯಾಗಿವೆ. ಇದಕ್ಕೆ ಪುಷ್ಟಿ ಎಂಬಂತೆ ಸೋಮವಾರ ಪೇಟೆಯಲ್ಲಿ ಒಂದು ಆನೆಯ ದಂತ ಪತ್ತೆಯಾಗಿದೆ ಎಂದು ಹೇಳಿದರು.

ಹೊಸಳ್ಳಿ ಬೆಟ್ಟದ ಹತ್ತಿರ ಸತ್ತ ಗಂಡಾನೆ ಕೋರೆಯನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡರು. ಉಳಿದ ನಾಲ್ಕು ಆನೆಯ ಕೋರೆಗಳು ದಂತ ಕಳ್ಳರ ಪಾಲಾದವು. ಬಹುಶ: ಕರ್ನಾಟಕದ ಎಲ್ಲೂ ಈ ರೀತಿಯ ಆನೆಗಳ ಕಗ್ಗೊಲೆ ನಡೆಯುತ್ತಿಲ್ಲ. ಹೀಗಾಗಿ ಸರಕಾರ ಕೂಡಲೇ ಎಚ್ಚೆತ್ತು ಆನೆಗಳ ಸರಣ ಸಾವು ಹಾಗೂ ದಂತ ಕಳವು ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಹೆದ್ದಾರಿ 75ರ ವಾಹನ ದಟ್ಟಣೆಯಿಂದ ಆನೆಗಳ ಹಿಂಡು ರಸ್ತೆ ದಾಟಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಸಕಲೇಶಪುರ, ಆಲೂರು ಭಾಗಕ್ಕೆ ಬೇಲೂರು ತಾಲೂಕಿನಲ್ಲಿ ಗುಂಪಾಗಿರುವ ಆನೆಗಳ ಓಡಾಡಲು ಸಾಧ್ಯವಾಗುತ್ತಿಲ್ಲ.

ಹೊಸೂರು ಎಸ್ಟೇಟ್‌ನ ಹೊಟೆಲ್ ಹತ್ತಿರದಿಂದ ಗುಳಗಳಲೆ, ಯಡಹಳ್ಳಿವರೆಗೂ 4 ಕಿಮೀ. ಮಾತ್ರ ಆನೆ ಕಾರಿಡಾರ್ ಇದೆ. ಬೆಳಗೋಡಿನಿಂದ ಎತ್ತಿನಹೊಳೆ ನೀರಿನ ಕಾಲುವೆ ಅಡ್ಡ ಬರುವುದರಿಂದ ಆನೆಗಳ ಕಾರಿಡಾರ್  ತುಂಡಾಗಿದೆ. ಗುಳಗಳಲೆ ಹೊಸೂರು ಎಸ್ಟೇಟ್‌ನ ಹೊಟೇಲ್‌ಗಳ ಮಧ್ಯೆ 2 ಕಿಮೀ. ಅಂತರದಲ್ಲಿ ಆನೆಗಳು ದಾಟಲು ಬನ್ನೇರುಘಟ್ಟ ಮಾದರಿ ಒಂದು ಸೇತುವೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.