ಸೆರೆ ಆಪರೇಷನ್ ಸಕ್ಸಸ್; ಅಭಿಮನ್ಯು ಟೀಂ ನಿಂದ ಮೊದಲ ದಿನವೇ ಪುಂಡಾನೆ ಖೆಡ್ಡಾಕ್ಕೆ

ಅಭಿಮನ್ಯು, ಕರ್ನಾಟಕ ಭೀಮ, ಧನಂಜಯ, ಸುಗ್ರೀವ, ಅಶ್ವತ್ಥಾಮ, ಪ್ರಶಾಂತ, ಹರ್ಷ, ಮಹೇಂದ್ರ ಸೇರಿ ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ

ಹಾಸನ: ಮೊದಲ ದಿನವೇ ಕಾಡಾನೆ ಕಾರ್ಯಾಚರಣೆಗೆ ಯಶಸ್ಸು ಸಿಕ್ಕಿದ್ದು, ಆಪರೇಷನ್ ಶುರುವಾದ ಎರಡೇ ಗಂಟೆಯಲ್ಲಿ ಪುಂಡಾನೆಯನ್ನು ಅಭಿಮನ್ಯು ಅಂಡ್ ಟೀಂ ಖೆಡ್ಡಾಕ್ಕೆ ಬೀಳಿಸಿದೆ. ಆಲೂರು ತಾಲ್ಲೂಕಿನ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್‌ನಲ್ಲಿ ಸಲಗನನ್ನು ಸೆರೆ ಹಿಡಿಯಲಾಗಿದೆ.

ಇಂದು ಬೆಳಗ್ಗೆಯಿಂದ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ನಲ್ಲೂರು ಗ್ರಾಮದಿಂದ ಕಾರ್ಯಾಚರಣೆ ಆರಂಭವಾಗಿತ್ತು.

ಲಾರಿ ಏರಿದ ಪುಂಡಾನೆಯ ಮೊಂಡಾಟ

ಗ್ರಾಮದ ಸಾರಾ ಎಸ್ಟೇಟ್‌ನಲ್ಲಿ ಒಂಟಿಸಲಗ ಇರುವುದನ್ನು ಖಾತ್ರಿ ಪಡಿಸಿಕೊಂಡ ಕಾರ್ಯಾಚರಣೆಯ ತಂಡ, ಅಭಿಮನ್ಯು, ಕರ್ನಾಟಕ ಭೀಮ, ಧನಂಜಯ, ಸುಗ್ರೀವ, ಅಶ್ವತ್ಥಾಮ, ಪ್ರಶಾಂತ, ಹರ್ಷ, ಮಹೇಂದ್ರ ಸೇರಿ ಎಂಟು ಸಾಕಾನೆಗಳೊಂದಿಗೆ ಅಲ್ಲಿಗೆ ದೌಡಾಯಿಸಿತು. ಜೊತೆಗೆ ಮೂವರು ವೈದ್ಯರು ಹಾಗೂ ನುರಿತ ತಂಡದ ಅಧಿಕಾರಿಗಳು ಸಿಬ್ಬಂದಿ ಇದ್ದರು.

ಪುಂಡಾನೆ ಕಂಡ ಕೂಡಲೇ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರಿಂದ ಪುಂಡಾನೆ ಸೆರೆ ಸಿಕ್ಕಿದೆ. ಅದನ್ನು ಪಳಗಿದ ಆನೆಗಳೊಂದಿಗೆ ಎಸ್ಟೇಟ್‌ನಿಂದ ಹೊರ ಕರೆ ತಂದು ಬೇರೆಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಈ ಮೊದಲು ನ.24 ರಿಂದ ಪುಂಡಾನೆ ಸೆರೆ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭವಾಗಿತ್ತು. ಆದರೆ ಡಿ.೪ ರಂದು ಕ್ಯಾಪ್ಟನ್ ಅರ್ಜುನ ಕಾಡಾನೆಯೊಂದಿಗೆ ಕಾದಾಡಿ ವೀರಣ ಮರಣ ಹೊಂದಿದ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಅದಾದ ಬಳಿಕ ಎರಡು ತಿಂಗಳ ನಂತರ ಮತ್ತೆ ಕಾರ್ಯಾಚರಣೆ ಆರಂಭವಾಗಿದ್ದು, ಸತತ ಒಂದು ತಿಂಗಳ ಕಾಲ ನಡೆಯಲಿದೆ. ಹಿಂದೆ ಆಗಿರುವ ತಪ್ಪುಗಳು ಮರುಕಳಿಸದಂತೆ ಈ ಬಾರಿಯ ಎಚ್ಚರಿಕೆಯ ಹೆಜ್ಜೆ ಇಡಲು ಅಧಿಕಾರಿಗಳು ಯೋಜಿಸಿದ್ದು, ಅದಕ್ಕಾಗಿ ಕಳೆದ ಬಾರಿ ಇದ್ದ ಆರು ಸಾಕಾನೆಗಳ ಬದಲಾಗಿ ಈ ಸಲ ಅಭಿಮನ್ಯು ಸೇರಿ 8 ಆನೆ ಕರೆಸಿಕೊಳ್ಳಲಾಗಿದೆ.

ಆಲೂರು, ಬೇಲೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಬೆಳೆಹಾನಿ, ಆಸ್ತಿಪಾಸ್ತಿ ನಷ್ಟ ಮಾತ್ರವಲ್ಲದೆ ಜೀವಹಾನಿಗೂ ಕಾರಣವಾಗಿರುವ ಪುಂಡಾನೆ ಸೆರೆ ಹಿಡಿದು, ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ಪ್ರತಿಭಟನೆ, ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಕಾಡಾನೆ ಸೆರೆ ಕಾರ್ಯಾಚರಣೆಗೆ ಚಾಲನೆ ನೀಡಿದೆ.