ಪತ್ರಕರ್ತರ ಸಂಘದಲ್ಲಿ ಡಿವಿಜಿ ನೆನಪು ಕಾರ್ಯಕ್ರಮ: ಮಂಕು ತಿಮ್ಮನ ಕಗ್ಗ ಸ್ಪೂರ್ತಿಯ ಸೆಲೆ;ಶಿವಾನಂದ ತಗಡೂರು

ನೂತನ ಅಧ್ಯಕ್ಷ ವೇಣುಕುಮಾರ್ ಅವರನ್ನು ಅಭಿನಂದಿಸಿದ ಪತ್ರಕರ್ತರು

ಹಾಸನ: ಪತ್ರಕರ್ತರಾಗಿ, ಸಾಹಿತಿಯಾಗಿ, ನಾಡು-ನುಡಿಯ ಹಿತಕ್ಕಾಗಿ ಅಹರ್ನಿಶಿ ದುಡಿದ ಡಿ.ವಿ.ಗುಂಡಪ್ಪ ಅವರದು ಬಹು ದೊಡ್ಡ ವ್ಯಕ್ತಿತ್ವ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ.ಶಿವಾನಂದ ತಗಡೂರು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದಲ್ಲಿಂದು ಹಮ್ಮಿಕೊಂಡಿದ್ದ ಡಿವಿಜಿ ಒಂದು ನೆನಪು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪತ್ರಿಕೋದ್ಯಮ ಮಾತ್ರವಲ್ಲದೆ ನಾಡಿಗೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಡಿವಿಜಿ ಅವರದು ಬೆರಗುಗೊಳಿಸುವ ವ್ಯಕ್ತಿತ್ವ, ಕೋಲಾರದ ಮುಳಬಾಗಿಲಲ್ಲಿರುವ ಅವರ ಮನೆ ಈಗ ಶಾಲೆ, ಗ್ರಂಥಾಲಯವಾಗಿದೆ. ಅವರಿದ್ದ ವಾಸದ ಮನೆಯನ್ನು ಶಾಲೆಗೆ ದಾನ ಮಾಡಿದ್ದರು ಎಂದರು.

ಡಿವಿಜಿ ಅವರು ಪತ್ರಕರ್ತರ ಸಂಘ ಹುಟ್ಟುಹಾಕಿ, ಸಂಘಟನೆ ಮಾಡದಿದ್ದರೆ ಈ ಸಂಘಟನೆ ಇಂದು ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ ಎಂದು ಹೇಳಿದರು.

೧೯೩೬ ರಲ್ಲಿ ಮೈಸೂರು ರಾಜ್ಯ ಪತ್ರಕರ್ತರ ಸಂಘ ಆರಂಭಿಸಿದಾಗ ಕೇವಲ ಐದಾರು ಜನ ಇದ್ದರು. ಇಂದು ಎಲ್ಲೆಡೆ ಬಲಿಷ್ಠವಾಗಿ ಇಂದು ೯ ಸಾವಿರ ಸದಸ್ಯರನ್ನು ಹೊಂದಿರುವ ದೇಶದ ದೊಡ್ಡ ಸಂಘಟನೆ ಎನಿಸಿದೆ ಎಂದು ನುಡಿದರು.
ಪತ್ರಿಕೋದ್ಯಮ ಜೊತೆಯಲ್ಲೇ ಪ್ರಖರ ಪಾಂಡಿತ್ಯ ಹೊಂದಿ ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಜನಪ್ರಿಯ ಮಂಕುತಿಮ್ಮನ ಕಗ್ಗ ಕೃತಿ ಓದಿದರೆ ಎಲ್ಲಿಲ್ಲದ ಸ್ಫೂರ್ತಿ ಬರಲಿದೆ. ನಾನು ಮೊದಲು ಪತ್ರಕರ್ತ, ಆಮೇಲೆ ಸಾಹಿತಿ ಎಂದು ಡಿವಿಜಿ ಹೇಳಿದ್ದನ್ನು ನೆನಪು ಮಾಡಿಕೊಂಡರು.

ಡಿವಿಡಿ ಅವರ ಸಲಹೆ ಸೂಚನೆ ಪಡೆಯಲು ಸಿಎಂ, ಕೇಂದ್ರ ಸಚಿವರೇ ಮನೆ ಹೋಗುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಅನೇಕರು ನೀಡಿದ ಆರ್ಥಿಕ ಸಹಾಯದ ಚೆಕ್‌ಗಳನ್ನು ಟ್ರಂಕ್‌ನಲ್ಲಿ ತುಂಬಿದ್ದುದು ಅವರು ಸತ್ತ ನಂತರ ತಿಳಿಯಿತು. ಅಷ್ಟು ಸ್ವಾಭಿಮಾನ, ನಿಷ್ಠೆಯನ್ನು ಡಿವಿಜಿ ಹೊಂದಿದ್ದರು.
ಅಂತವರ ನೆನಪನ್ನು ತವರು ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಸಂತಸಗೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತರ ಶೇಷಾದ್ರಿ, ಡಿವಿಜಿ ಸೇವೆ ಸ್ಮರಿಸಿ, ಅವರ ಕೃತಿಗಳನ್ನು ಓದುವಂತೆ ಸಲಹೆ ನೀಡಿದರು.

ದಿಕ್ಸೂಚಿ ಮಾತುಗಳನ್ನಾಡಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ. ಮದನಗೌಡ, ಡಿವಿಜಿ ಅವರು ಸ್ಥಾಪಿಸಿದ ಕೆಯೂಡಬ್ಲೂö್ಯಜೆಗೆ ೯೦ ವರ್ಷ ತುಂಬಿದಿದೆ. ಬಳಿಕ ಅನೇಕರು ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದರು.
ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಆ ಕೆಲಸ ನಮ್ಮೆಲ್ಲರ ಹೆಮ್ಮೆಯ ಶಿವಾನಂದ ಅವರ ಅಧ್ಯಕ್ಷತೆಯಲ್ಲೇ ನಡೆಯಲಿ ಎಂದು ಆಶಿಸಿದರು. ಈ ಕಾರ್ಯಕ್ರಮ ರಾಜ್ಯವ್ಯಾಪಿ ನಿರಂತರವಾಗಿ ನಡೆಯಲಿ ಎಂದು ಆಶಿಸಿ, ನೂತನ ಅಧ್ಯಕ್ಷರು ಹಾಗೂ ಅವರ ಬಳಗಕ್ಕೆ ಅಭಿನಂದನೆ ಹೇಳಿದರು.

ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ ಮಾತನಾಡಿ, ಪತ್ರಕರ್ತರಿಗೆ ಅಡಿಪಾಯ ಹಾಕಿದವರು ಡಿವಿಜಿ, ಆದರಿಂದ ಪತ್ರಕರ್ತರ ಸ್ಥಿತಿ ಅತಂತ್ರವಾಗಿದೆ. ಅವರಿಗೆ ದಾರಿ ಕಾಣ ಸಲು ಸಹಕಾರ ಸಂಸ್ಥೆ ಹುಟ್ಟುಹಾಕಿ ಎಂದು ಕಿವಿಮಾತು ಹೇಳಿದರು. ಸಂಬಂಧಪಟ್ಟವರು ಗಂಭೀರವಾಗಿ ಯೋಚಿಸಿ ಎಂದರು.
ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಬಿ.ಆರ್.ಉದಯಕುಮಾರ್ ಹಾಗೂ ಎಂ.ವಿ.ಶಿವರಾಂ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ನೂತನ ಅಧ್ಯಕ್ಷ ಕೆ.ಹೆಚ್.ವೇಣುಗೋಪಾಲ್ ಮಾತನಾಡಿ, ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ದಾರಿ ದೀಪ. ಅವರು ಕಟ್ಟಿ ಬೆಳೆಸಿದ ಸಂಘದಲ್ಲಿ ನಾವಿರುವುದು ಖುಷಿಯಾಗಿದೆ ಎಂದರು. ಇದೇ ವೇಳೆ ಶಿವಾನಂದ ತಗಡೂರು ಹಾಗೂ ವಿವಿಧ ಅಭಿಮಾನಿಗಳು ವೇಣು ಕುಮಾರ್ ಅವರನ್ನು ಅಭಿನಂದಿಸಿದರು.

ಹೆತ್ತೂರು ನಾಗರಾಜ್, ನಿರೂಪಿಸಿದರು. ಕೆ.ಎಂ.ಹರೀಶ್ ಸ್ವಾಗತಿಸಿದರು.