ಹಾಸನ: ನಿಂತಿದ್ದ ಕಾರಿನಲ್ಲಿ ಆಟವಾಡುತ್ತಿದ್ದ ಬಾಲಕರಿಬ್ಬರ ಚೇಷ್ಟೆಯಿಂದಾಗಿ ಕಾರು ಸ್ಟಾರ್ಟ್ ಆಗಿ ದೇವಾಲಯದ ಕಾಂಪೌಂಡ್ ಗೆ ಡಿಕ್ಕಿಯಾಗಿ ಓರ್ವ ಬಾಲಕ ಮೃತಪಟ್ಟು ಮತ್ತೊರ್ವ ಗಂಭೀರವಾಗಿ ಗಾಯಗೊಂಡ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ನಾಗಸಮುದ್ರ ಗ್ರಾಮದಲ್ಲಿ ನಡೆದಿದೆ.
ನಾಗಸಮುದ್ರ ಗ್ರಾಮದಲ್ಲಿ ನಿಂತಿದ್ದ KA-41 M-6622 ನಂಬರ್‌ನ ಹುಂಡೈ ಕಾರಿನಲ್ಲಿ ಕುಳಿತು ಆಟವಾಡುತ್ತಿದ್ದ ಉಮೇಶ್ (17) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು ಹಾಗೂ ಆಕಾಶ್ ತೀವ್ರವಾಗಿ ಗಾಯಗೊಂಡಿದ್ದಾನೆ.
ಬಾಲಕರಿಬ್ಬರು ಸಂಬಂಧಿಯೊಬ್ಬರ ಕಾರಿನಲ್ಲಿ ಕುಳಿತು ಆಟವಾಡುವಾಗ ಕಾರು ಸ್ಟಾರ್ಟ್ ಆಗಿ ಮುಂದೆ ಚಲಿಸಿದೆ. ಇದರಿಂದ ಬೆದರಿದ ಡ್ರೈವಿಂಗ್ ಸೀಟ್ ನಲ್ಲಿ ಕುಳಿತಿದ್ದ ಬಾಲಕ ಬ್ರೇಕ್ ಬದಲು ಎಕ್ಸ ಲೇಟರ್ ತುಳಿದಿದ್ದಾನೆ.
ಇದರಿಂದ ಕಾರು ನಿಲ್ಲುವ ಬದಲು ವೇಗವಾಗಿ ಹೋಗಿ ದೇವಾಲಯದ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಕಾರು ಮಾಲೀಕ ಕಾರಿನ ಸಮೇತ ಪರಾರಿಯಾಗಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.