ವರುಣಾರ್ಭಟ; ಕೊಚ್ಚಿ ಹೋದ ಹಾಸನದ ರಿಂಗ್ ರಸ್ತೆ ವಾಹನ ಸಂಚಾರ ಸ್ಥಗಿತ

ಹಾಸನ: ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನಗರದ ಸುತ್ತಮುತ್ತ ಕೆರೆಗಳು ತುಂಬಿ ಕೋಡಿ ಒಡೆದು ರಸ್ತೆ ಮೇಲೆ ನೀರು ಹರಿದಿದ್ದು, ನಗರದ ತಮ್ಲಾಪುರ, ಉದ್ದೂರು ಮಧ್ಯೆ ಹಾದು ಹೋಗುವ ರಿಂಗ್ ರಸ್ತೆ ಮೇಲೆ ಜಲ ಪ್ರವಾಹವೇ ಉಂಟಾಗಿದೆ.

ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ವಾಹನ ಸಂಪರ್ಕವೇ ಕಡಿತಗೊಂಡಿದೆ. ವಾಹನ ಸವಾರರು ನೀರಿನಲ್ಲಿ ಬೈಕ್ ಚಲಾಯಿಸಲು ಹೋಗಿ ಕೆಳಗೆ ಬಿದ್ದು ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿದು ತೇಜೂರು ಕೆರೆ, ಸೀಗೆ ಕೆರೆ, ಚಿಕ್ಕಕೊಂಡಗೊಳ ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದೆ.

ನೀರು ತಗ್ಗು ಪ್ರದೇಶವಾದ ತಮ್ಲಾಪುರಕ್ಕೆ 80 ಅಡಿ ರಸ್ತೆಗೆ ಹಾದು ಹೋಗುವ ರಸ್ತೆ ಮೇಲೆ ಸಮುದ್ರದಂತೆ ನೀರು ಹರಿಯುತ್ತಿದೆ. ಈ ವೇಳೆ ಹಾಕಲಾದ ಟಾರ್ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದನ್ನರಿತ ಗ್ರಾಮಸ್ಥರು ಪೊಲೀಸ್ ಠಾಣೆಗೆ ಕರೆ ಮಾಡಿ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಮಾಡಿದರು.

ಇಲ್ಲವಾದರೆ ನೀರಿನ ಸೆಳವು ಅರಿಯದೆ ಬಂದ ವಾಹನ ಸವಾರರು ಅವಘಡಕ್ಕೆ ಸಿಲುಕಬೇಕಾಗುತ್ತಿತ್ತು. ಪೊಲೀಸ್ ಭದ್ರತೆಯ ನಡುವೆಯೂ ಅನೇಕ ವಾಹನ ಸವಾರರು ದ್ವಿಚಕ್ರ ವಾಹನ ಚಲಾಯಿಸಲು ಯತ್ನಿಸಿ ಬೀಳುವ ದೃಶ್ಯಗಳು ಮಾಮೂಲಾಗಿದ್ದವು.

ರಿಂಗ್ ರಸ್ತೆ ಸುತ್ತಮುತ್ತಲಿನ ಹೊಸ ಲೇಔಟ್ ಗಳು ಸಂಪೂರ್ಣ ಜಲಾವೃತವಾಗಿವೆ. ಹಲವು ಅಂಗಡಿ, ಮನೆಗಳಿಗೂ ನೀರು ನುಗ್ಗಿದೆ. ಆ ಭಾಗದ ಶುಂಠಿ, ಜೋಳ, ರಾಗಿ ಬೆಳೆಗಳಿದ್ದ ರೈತರ ಹೊಲಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ರಿಂಗ್ ರಸ್ತೆಗೆ ಮೇಲ್ಸೇತುವೆ‌ ನಿರ್ಮಾಣ ಮಾಡಬೇಕು. ಬೆಳೆ ನಷ್ಟವಾದ ರೈತರಿಗೆ ಸರಕಾರ ಸೂಕ್ತ ಪರಿಹಾರ ಕೊಡಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಾಜ ಸೇವಕ ತಮ್ಲಾಪುರ ಗಣೇಶ್ ಆಗ್ರಹಿಸಿದರು.