ರಾಸಾಯನಿಕ ಕೃಷಿ ತ್ಯಜಿಸಿ; ಡಾ.ಜಗದೀಶ್‌ ಮಿಟ್ಟೂರು ಸಲಹೆ

ಜೋಗಿಹಳ್ಳಿಯಲ್ಲಿ ಕಾಡುಕೃಷಿಕರ ಶಾಲೆ ಉದ್ಘಾಟನೆ ಸಮಾರಂಭ

ಹಾಸನ: ಭೂಮಿ ಮೇಲಿನ ಜೀವಸಂಕುಲದ ಉಳಿವಿಗಾಗಿ ರೈತರು ರಾಸಾಯನಿಕಗಳ ಬಳಕೆಯನ್ನು ತ್ಯಜಿಸಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಬಯೋಇನ್ನೋವೇಶನ್‌ ಸೆಂಟರ್‌ ನ ನಿರ್ದೇಶಕ  ಡಾ.ಜಗದೀಶ್‌ ಮಿಟ್ಟೂರು ಸಲಹೆ ನೀಡಿದರು.

ಬೇಲೂರು ತಾಲೂಕು ಹಳೇಬೀಡು ಸಮೀಪದ ಜೋಗಿಹಳ್ಳಿಯಲ್ಲಿ ಈರತ್ತೇಗೌಡ, ಪಾರ್ವತಮ್ಮ ದಂಪತಿಯ ಸಾವಯವ ತೋಟದಲ್ಲಿ ತಿಪಟೂರಿನ ರಂಗಪ್ಪ ಹಲಗಮ್ಮ ಟ್ರಸ್ಟ್ ಸಹಯೋಗದಲ್ಲಿ ಸ್ಥಾಪಿಸಿರುವ ‘ಕಾಡು ಕೃಷಿಕರ ಶಾಲೆ-೫ ಉದ್ಘಾಟಿಸಿ ಮಾತನಾಡಿದರು.

ಮಿತಿಮೀರಿದ  ರಾಸಾಯನಿಕ ಬಳಕೆಯಿಂದ ಇಂದು ಭುವಿಯ ಎಲ್ಲ ಪ್ರಭೇದಗಳು ನಲುಗುತ್ತಿದ್ದು, ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನ ಬಳಸದೆಯೇ ನಮ್ಮ ಪೂರ್ವಜರು ಮಾಡುತ್ತಿದ್ದ ಸಾವಯವ ಕೃಷಿಯನ್ನು ನಾವು ಅಳವಡಿಸಿಕೊಳ್ಳುವುದರಿಂದ ಭೂಮಿಯ ಆರೋಗ್ಯ ಜತೆಗೆ ಜೀವವೈವಿಧ್ಯತೆಯನ್ನೂ ರಕ್ಷಿಸಬಹುದು ಎಂದರು.

ಈಗ ಕಾಡು ಕೃಷಿಕರ ಐದನೇ ಶಾಲೆ ಸ್ಥಾಪನೆಯಾಗಿರುವುದು ಬಹಳ ಆಶಾದಾಯಕ ಸಂಗತಿಯಾಗಿದೆ. ಇಲ್ಲಿನ ಡಾ.ಮಳಲಿಗೌಡ ಸಾವಯವ ಕೃಷಿಕರನ್ನು ಗುರುತಿಸಿ ಉತ್ತೇಜಿಸುತ್ತಿದ್ದಾರೆ. ಪ್ರತಿಯೊಬ್ಬ ರೈತರೂ ಈ ಶಾಲೆಯ ಉಪಯೋಗಪಡೆದುಕೊಳ್ಳಬೇಕು ಎಂದರು.

ಕೇವಲ ಸಾವಯವ ಕೃಷಿಯನ್ನೇ ಮಾಡುತ್ತಿರುವ ಕೃಷಿಕರಿಗೆ ಬೆಂಗಳೂರಿನ ಫೌಂಡೇಷನ್‌ ಫಾರ್‌ ಕ್ವಾಲಿಟಿ ಇಂಡಿಯಾ ಸಂಸ್ಥೆಯ  ಡಾ.ತುಫಿಲ್ ವೆಂಕಟೇಶ್ ಜಿ-೧  ಪ್ರಮಾಣ ಪತ್ರ ವಿತರಿಸಿದರು.

ಉಪನ್ಯಾಸಕ ಕುಮಾರ್‌, ಪ್ರಗತಿಪರ ರೈತ ಯೋಗೀಶಪ್ಪ,  ಹಸಿರುಭೂಮಿ ಪ್ರತಿಷ್ಠಾನದ ಖಜಾಂಚಿ ಗಿರಿಜಾಂಬಿಕ ದಿನೇಶ್‌,   ಸೌಭಾಗ್ಶಮ್ಮ, ಏಕಲವ್ಯ ರೋವರ್ಸ್‌ ದಳದ ಕಾಂಚನಮಾಲ, ಹಳೇಬೀಡು ಶಾಲೆಯ ಶಿಕ್ಷಕಿ ಮಮತಾ ಪ್ರಭು, ಸುತ್ತಮುತ್ತಲಿನ ಗ್ರಾಮಗಳ ಸಾವಯವ ಕೃಷಿಕರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.