ಹಾಸನ ಎಸಿಯಾಗಿ ಸೇವೆ ಸಲ್ಲಿಸಿದ್ದ ದಕ್ಷ, ಪ್ರಾಮಾಣಿಕ ಕೆಎಎಸ್ ಅಧಿಕಾರಿ ಡಾ.ಎಚ್‌.ಎಲ್.ನಾಗರಾಜು ಗೆ ಮತ್ತೆ ಸನ್ಯಾಸತ್ವದ ಸೆಳೆತ!; ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಶೀಘ್ರ

ಮಂಡ್ಯ: ಹಿಂದೆ ತಹಸೀಲ್ದಾರ್ ಹುದ್ದೆ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿ ಬಳಿಕ ಸರ್ಕಾರಿ ಹುದ್ದೆಗೆ ವಾಪಾಸಾಗಿದ್ದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದೀಗ ಮತ್ತೆ ಸನ್ಯಾಸತ್ವದತ್ತ ಮುಖ ಮಾಡಿದ್ದಾರೆ. ಅದರಂತೆ ಶೀಘ್ರದಲ್ಲಿಯೇ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಲಿದ್ದಾರೆ.

ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರ ಜತೆಗೆ ಜನಸ್ನೇಹಿ ಅಧಿಕಾರಿ ಎನ್ನುವ ಪ್ರೀತಿಗೆ ಪಾತ್ರರಾಗಿದ್ದ ನಾಗರಾಜು, ಇದ್ದಕ್ಕಿದ್ದಂತೆ ಸನ್ಯಾಸತ್ವ ದೀಕ್ಷೆ ತೆಗೆದುಕೊಳ್ಳುವ ನಿರ್ಧಾರ ಆಶ್ಚರ್ಯ ಮೂಡಿಸಿದೆ. ಜತೆಗೆ ಈ ಬಗ್ಗೆ ಜಿಲ್ಲಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

2011ರಲ್ಲಿ ತಹಸೀಲ್ದಾರ್ ಆಗಿದ್ದ ನಾಗರಾಜು, ಆ ಸಮಯದಲ್ಲಿ ಹುದ್ದೆ ತ್ಯಜಿಸಿ ಆದಿಚುಂಚನಗಿರಿ ಮಠದಲ್ಲಿ ಸ್ವಾಮೀಜಿಯಾಗಿ ದೀಕ್ಷೆ ಪಡೆದುಕೊಂಡಿದ್ದರು. ಆ ವೇಳೆ ನಿಶ್ಚಲಾನಂದನಾಥ ಸ್ವಾಮೀಜಿ ಎಂದು ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು.

ಆದರೆ ಆಗ ಸಾರ್ವಜನಿಕ ಸೇವೆಯಲ್ಲಿ ಮುಂದುವರಿಯುವಂತೆ ಬಾಲಗಂಗಾಧರನಾಥ ಶ್ರೀಗಳು ಸೂಚಿಸಿದ್ದರಿಂದ ಅವರ ಒತ್ತಾಯಕ್ಕೆ ಮಣಿದು ಸನ್ಯಾಸತ್ವ ತ್ಯಜಿಸಿ ಸರ್ಕಾರಿ ಹುದ್ದೆ ಮರಳಿದ್ದರು. ಇದಾದ ಬಳಿಕ ನಿಷ್ಠೆ, ದಕ್ಷ ಆಡಳಿತದ ಮೂಲಕ ಜನಮನ್ನಣೆ ಗಳಿಸಿಕೊಂಡಿದ್ದರು. ಆದರೀಗ ನಾಗರಿಕ ಸೇವೆ ತೊರೆದು ಚಂದ್ರಶೇಖರ ಸ್ವಾಮೀಜಿ ಶಿಷ್ಯರಾಗಿ ಮುಂದುವರಿಯಲಿದ್ದಾರೆ.

ಪ್ರಸ್ತುತ ಎಡಿಸಿ ಹುದ್ದೆಯ ಜತೆಗೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಇದಲ್ಲದೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಹಾಗೂ ಹಣಕಾಸು ಸಮಿತಿಯಲ್ಲಿಯಲ್ಲಿದ್ದರು. ಯಾವುದೇ ಕಾರ್ಯಕ್ರಮವಾದರೂ ಆಹ್ವಾನ ಕೊಟ್ಟರೆ ತಪ್ಪದೇ ಭಾಗವಹಿಸುತ್ತಿದ್ದ ನಾಗರಾಜು, ತಮ್ಮ ಅತ್ಯುತ್ತಮ ಭಾಷಣದ ಮೂಲಕ ಗಮನಸೆಳೆಯುತ್ತಿದ್ದರು.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆ ಮೂಡಿಸುವ ಮಾತುಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆನ್ನುವ ಮಾತಿದೆ. ಮೂಲಗಳ ಪ್ರಕಾರ ಡಿ.5ರಿಂದ ದೀರ್ಘ ರಜೆ ಮೇಲೆ ನಾಗರಾಜು ತೆರಳಲಿದ್ದಾರೆಂದು ಹೇಳಲಾಗುತ್ತಿದೆ.

ಡಾ.ಎಚ್.ಎಲ್.ನಾಗರಾಜು ಸನ್ಯಾಸತ್ವ ತೆಗೆದುಕೊಳ್ಳುತ್ತಾರೆನ್ನುವ ವಿಚಾರ ಬಂದಿದೆ. ಅದು ಅವರ ವೈಯಕ್ತಿಕ ವಿಚಾರ. ಹಿಂದೆ ನಾಗರಾಜು ದೀಕ್ಷೆ ತೆಗೆದುಕೊಂಡಿದ್ದರು. ಆಗ ಹಿತೈಷಿಗಳ ಒತ್ತಾಯದಿಂದ ವಾಪಸ್ ಬಂದಿದ್ದರು. ಈಗ ಮತ್ತೆ ಅದೇ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನೆರಡು ದಿನದಲ್ಲಿ ರಜೆ ತೆಗೆದುಕೊಳ್ಳಲಿದ್ದಾರೆ. ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು.
-ಎನ್.ಚಲುವರಾಯಸ್ವಾಮಿ
ಜಿಲ್ಲಾ ಉಸ್ತುವಾರಿ ಸಚಿವ