ಜೆಡಿಎಸ್ ಮುಗಿಸುತ್ತೀನಿ ಅನ್ನಬೇಡಿ, ನಿಮ್ಮ ಅಧಿಕಾರದ ಅಹಂ ಇಳಿಸುತ್ತೇನೆ: ಸಿಎಂ ವಿರುದ್ಧ ಗುಡುಗಿದ ಎಚ್.ಡಿ.ದೇವೇಗೌಡ

ಲೋಕಸಭಾ ಚುನಾವಣೆ ಆದಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಅನ್ನೋದನ್ನ ಕಾದುನೋಡೋಣ

ಹಾಸನ: ಜೆಡಿಎಸ್ ಮುಗಿಸುತ್ತೇನೆ ಎಂಬ ಗರ್ವದ ಮಾತುಗಳನ್ನಾಡಬೇಡಿ, ನಾನಿನ್ನೂ ಬದುಕಿದ್ದೇನೆ, ಕುಳಿತಿದ್ದರೂ ಬುದ್ದಿ ಕೆಲಸ ಮಾಡುತ್ತದೆ. ನಿಮ್ಮ ಅಧಿಕಾರದ ಅಹಂನ್ನು ಇಳಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಾನು ಯಾರಿಗೂ ಜಗ್ಗಲ್ಲ, ಇವರು ಏನೇನು ಮಾಡಿದ್ದಾರೆ ಒಂದೊಂದು ಎಳೆಎಳೆಯಾಗಿ ಬಿಡಿಸಿಡುತ್ತೇನೆ. ಸಿದ್ದರಾಮಯ್ಯ ಇವತ್ತು ಬಹಳ ಟ್ವೀಟ್ ಮಾಡಿ ಬಿಟ್ಟಿದ್ದಾರೆ ಎಲ್ಲಿದೆ ಜೆಡಿಎಸ್ ಅಂತ ಹೇಳ್ತಾರೆ. ಈ ಸಂತೆ ಮೈದಾನದಲ್ಲಿ ಸೇರಿರುವ ಪುಣ್ಯಾತ್ಮರು ನೀವು ಯಾವ ಪಾರ್ಟಿ? ಎಷ್ಟು ಅಹಂ ನೋಡಿ ಅವರಿಗೆ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಈ‌ ಸಂತೇಮಾಳದಲ್ಲಿ ಜೆಡಿಎಸ್ ಇದೇ ಅನ್ನೋದನ್ನ ತೋರಿಸಲು ನೀವು ಇಲ್ಲಿ ಸೇರಿದ್ದೀರಾ. ಏ.4 ಹಾಸನದಲ್ಲಿ ಅರವತ್ತು, ಎಪ್ಪತ್ತು ಸಾವಿರ ಜನ ಸೇರ್ತಾರೆ, ಅಲ್ಲಿ ಹೇಳ್ತೇನೆ. ಅವರು ಏ.5 ಕ್ಕೆ ಹಾಸನಕ್ಕೆ ಬರ್ತಾರಂತೆ, ಬರಲಿ. ಲೋಕಸಭಾ ಚುನಾವಣೆ ಆದಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಅನ್ನೋದನ್ನ ಕಾದುನೋಡೋಣ. ಈ ಬಾರಿ ಜನರು ತೀರ್ಮಾನಿಸುತ್ತಾರೆ ಎಂದರು.