ಕೇಂದ್ರ ಸರ್ಕಾರದೊಂದಿಗೆ ಹೋರಾಡಬೇಕಿದ್ದ ಸಂಸದ ರೈತರಿಗೆ ಡೇರಿ ನೀರಿನ ಪ್ಯಾಕೆಟ್ ಹಂಚುವುದು ಸಾಧನೆಯೇ?; ಪ್ರಜ್ವಲ್ ರೇವಣ್ಣ ವಿರುದ್ಧ ಶಿವಲಿಂಗೇಗೌಡ ಕಿಡಿ

ಹೆಂಗಸರನ್ನು ಬೀದಿಯಲ್ಲಿ ಮಲಗಿಸಿದ್ದೀರಿ, ರಾತ್ರಿಯೆಲ್ಲಾ ಸೊಳ್ಳೆ ಕೈಯಲ್ಲಿ ಕಡಿಸಿಕೊಂಡು ಬೀದಿಯಲ್ಲಿ ರೈತರು ಮಲಗಿದರು.

ಹಾಸನ: ಕೊಬ್ಬರಿ ಖರೀದಿ ನೆಪದಲ್ಲಿ ರೈತರು ಬೀದಿಯಲ್ಲಿ ನಿಂತು ಅನ್ನ ತಿನ್ನುವಂತೆ ಮಾಡಿದ ಕೇಂದ್ರ ಸರ್ಕಾರಕ್ಕೆ ಮರ್ಯಾದೆ ಇದೆಯೇ? ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಕಿಡಿಕಾರಿದರು.

ಕೇಂದ್ರ ಸರ್ಕಾರ ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿಕೊಂಡ ಸರ್ಕಾರ ಜಿಲ್ಲೆಯಲ್ಲಿ ಉತ್ಪಾನೆಯಾಗಿರುವ 1,42,೦೦೦ ಕ್ವಿಂಟಾಲ್ ಕೊಳ್ಳುತ್ತಿಲ್ಲ. ರೈತರು ಅದನ್ನು ಏನು ಮಾಡಬೇಕು? ಸರ್ಕಾರ ಇದರಿಂದ ಏನು ಸಾಧನೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಭಾನುವಾರ ಮಾತನಾಡಿದ ಅವರು, ರೈತರು ಉಳಿಯಬೇಕು, ಕೊಬ್ಬರಿ ಬೆಳೆಗಾರರು ಉಳಿಯಬೇಕು. ಜಿಲ್ಲೆಯಲ್ಲಿ 19,961 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ.

ಅದರಲ್ಲಿ ತೆಂಗಿನ ಇಳುವರಿ 31,33,381 ಕ್ವಿಂಟಾಲ್ ಇದೆ. 3,62,೦೦೦ ಕೊಬ್ಬರಿ ಇಳುವರಿ ಬರುತ್ತೆ. ನ್ಯಾಫೆಡ್‌ನಿಂದ 2,2೦,೦೦೦ ಕ್ವಿಂಟಾಲ್ ಕೊಬ್ಬರಿ ಖರೀದಿಸಿದ್ದಾರೆ.

1,46,೦೦೦ ಕ್ವಿಂಟಾಲ್ ಕೊಬ್ಬರಿ ಉಳಿದಿದೆ. ಯಾವುದೇ ಮಿತಿ ಇಲ್ಲದೆ ಎಲ್ಲಾ ಕೊಬ್ಬರಿ ಖರೀದಿಸಿದ್ದರೆ ಅನುಕೂಲ ಆಗುತ್ತಿತ್ತು. ಹೆಂಗಸರನ್ನು ಬೀದಿಯಲ್ಲಿ ಮಲಗಿಸಿದ್ದೀರಿ, ರಾತ್ರಿಯೆಲ್ಲಾ ಸೊಳ್ಳೆ ಕೈಯಲ್ಲಿ ಕಡಿಸಿಕೊಂಡು ಬೀದಿಯಲ್ಲಿ ರೈತರು ಮಲಗಿದರು.

ಬೀದಿಯಲ್ಲಿ ನಿಂತು ರೈತರು ಅನ್ನ ತಿಂದಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾನ, ಮರ್ಯಾದೆ ಇದೆಯಾ? ಬಿಜೆಪಿಯವರಿಗೆ ಆತ್ಮಗೌರವ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಹೋರಾಟ ಮಾಡಿದ ಫಲವಾಗಿ ಹೆಚ್ಚುವರಿ 45 ಸಾವಿರ ಕ್ವಿಂಟಾಲ್ ಹೆಚ್ಚುವರಿಯಾಗಿ ಖರೀದಿಸಿದರು. ರೈತರನ್ನು ಕೇಂದ್ರ ಸರ್ಕಾರ ಅಸಡ್ಡೆಯಿಂದಲೇ ಕಾಣುತ್ತಿದೆ. ಕ್ಷೇತ್ರದ ಸಂಸದ ಎನಿಸಿಕೊಂಡವರು ಕೇಂದ್ರದ ಜತೆ ಹೋರಾಡಿ ಎಲ್ಲಾ ಕೊಬ್ಬರಿ ಖರೀದಿಸಬೇಕಿತ್ತು.

ಅದನ್ನು ಬಿಟ್ಟು ರೈತರಿಗೆ ಪ್ಯಾಕೆಟ್ ನೀರು ಕೊಡುವುದು ಸಾಧನೆಯಲ್ಲ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿಕಾರಿದರು.