ಜಿಲ್ಲಾ ಪತ್ರಕರ್ತರ ಸಂಘದಿಂದ ವಿಶ್ವ ಛಾಯಾಗ್ರಾಹಕ ದಿನಾಚರಣೆ; ಫೋಟೋ ಜರ್ನಲಿಸ್ಟ್ ಗಳಿಗೆ ಸನ್ಮಾನ

ಹಾಸನ: ಸಮಾಜವನ್ನು ಪ್ರಜ್ಞಾವಂತಿಕೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕ್ಯಾಮರಾಗಳು ಬಹಳ ಮುಖ್ಯ ಪಾತ್ರ ವಹಿಸಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್. ಎಲ್ ಮಲ್ಲೇಶ್ ಗೌಡ ಹೇಳಿದರು.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನನದಲ್ಲಿ ಇಂದು ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಗ್ರಹಣಕ್ಕೆ ವಿಶ್ವದಲ್ಲೇ ವಿಶೇಷವಾದ ಮಾನ್ಯತೆ ಇದೆ. ಒಂದು ಕಾರ್ಯಕ್ರಮ ಅಥವಾ ಒಂದು ಘಟನೆಯ ಸಂಪೂರ್ಣ ವಿಚಾರವನ್ನು ಮನದಟ್ಟು ಮಾಡುವ ಶಕ್ತಿ ಒಂದು ಫೋಟೋ ಗೆ ಇದೆ. ಇತ್ತೀಚಿನ ದಿನಗಳಲ್ಲಿ ಸುದ್ಧಿಗಳಿಗಿಂತ ಚಿತ್ರಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರ ಶ್ರಮ ಅಪಾರವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಛಾಯಾಗ್ರಹಣ ಕೂಡ ಒಂದು ಸವಾಲಿನ ಕೆಲಸವಾಗಿದೆ, ಶೋಧದ ಅಥವಾ ತನಿಖಾ ವಿಚಾರವಾಗಿ ತೆಗೆದ ಚಿತ್ರಗಳು ಹಲವು ಭಾರಿ ಪ್ರಮುಖ ಸಾಕ್ಷ್ಯ ಗಳಾಗಿರುವ ಅನೇಕ ಉದಾಹರಣೆಗಳಿವೆ. ಜೊತೆಗೆ ಅಂತಹ ಸಂಧರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರುವ ಹಲವು ಉದಾಹರಣೆಗಳು ಕೂಡ ಇವೆ. ಪ್ರಸ್ತುತ ಸಂದರ್ಭದಲ್ಲಿ ಕ್ಯಾಮರಾ ಗಳು ಎದುರು ಇರುವ ಕಾರಣದಿಂದಲೇ ಅನೇಕರು ಜಾಗರೂಕರಾಗಿ ಮಾತನಾಡುವ ಅನಿವಾರ್ಯತೆ ಎದುರಾಗಿದೆ ಎಂದರು.

ಛಾಯಾಗ್ರಾಹಕರ ದಿನಾಚರಣೆಯನ್ನು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಛಾಯಾಗ್ರಾಹಕರ ಪ್ರೋತ್ಸಾಹಿಸುವ ಕೆಲಸಗಳು ಆಗಬೇಕಿದೆ ಎಂದ ಅವರು ಛಾಯಾಗ್ರಾಹಕರ ದಿನಾಚರಣೆ ಶುಭ ಕೋರಿದರು.

ಸಂಘದ ಅಧ್ಯಕ್ಷ ವೇಣುಕುಮಾರ್ ಮಾತನಾಡಿ, ಮಾನವೀಯತೆ ಜೊತೆಗೆ ತಮ್ಮ ಕರ್ತವ್ಯ ನಿಷ್ಠೆ ಮೆರೆಯುವುದು ನಿಜವಾದ ಛಾಯಾಗ್ರಹಣ ಲಕ್ಷಣವಾಗಿದೆ,ತಮ್ಮ ಕೆಲಸದ ನಡುವೆ ತಮ್ಮನ್ನು ಕೂಡ ತಾವು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಛಾಯಾಗ್ರಾಹಕರು ಮುಂದಾಗಬೇಕಿದೆ ಎಂದರು.

ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರು ಅನೇಕ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಇದೆ. ಕ್ಯಾಮರಾ ಒಬ್ಬ ಪತ್ರಕರ್ತನನ್ನು ರಕ್ಷಣೆಯನ್ನು ಮಾಡುತ್ತದೆ ಕೆಲವು ಘಟನೆಗಳಲ್ಲಿ ಅದರಿಂದ ಸಮಸ್ಯೆ ಎದುರಾಗಿರುವುದು ಉಂಟು ಎಂದರು.

ಕಾರ್ಯಕ್ರಮದಲ್ಲಿ ಕಳೆದ ಅನೇಕ ವರ್ಷಗಳಿಂದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಛಾಯಾಗ್ರಾಹಕರಾದ ಅತೀಕ್ ಉರ್ ರೆಹಮಾನ್, ನಟರಾಜ್‌, ಪ್ರಕಾಶ್, ಜ್ಞಾನೇಶ್ವರ್ , ಅಂಬಿಕಾ ಪ್ರಸಾದ್ ಹಾಗೂ ಶ್ರೀನಿವಾಸ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಂಜುನಾಥ್, ಜಿ.ಪ್ರಕಾಶ್, ಜಿಲ್ಲಾ ಸಂಘದ ಪ್ರದಾನ ಕಾರ್ಯದರ್ಶಿ ಶಶಿಧರ್ ಬಿ.ಸಿ, ಉಪಾಧ್ಯಕ್ಷ ಹರೀಶ್, ಮೋಹನ್ ಇತರರು ಇದ್ದರು.