ಹಾಸನ: ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಸೆ.6ರಂದು ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಎತ್ತಿನಹೊಳೆ ಯೋಜನೆ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗಾಗಿ ಹೆಬ್ಬನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೆ.6 ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆಗೆ ಬಾಗಿನ ಅರ್ಪಿಸುವ ನಮ್ಮ ಸಂಪ್ರದಾಯಕ್ಕೆ ಪೂರಕವಾಗಿರುವ ವಿಧಿವಿಧಾನಗಳನ್ನು ನಮ್ಮ ಉಪಮುಖ್ಯಮಂತ್ರಿಗಳು ನಿಶ್ಚಯ ಮಾಡಿದ್ದಾರೆ. ಸೆ.6 ರಂದು ಮುಖ್ಯಮಂತ್ರಿಗಳು ವಿಧ್ಯುಕ್ತವಾಗಿ ಎತ್ತಿನಹೊಳೆ ಯೋಜನೆಗೆ ಚಾಲನೆ ಕೊಡಲಿದ್ದಾರೆ ಎಂದರು.
ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ವಿರುದ್ಧ ದಿಕ್ಕಿಗೆ ಪೂರ್ವಾಭಿಮುಖವಾಗಿ ಹರಿಸುವ ವಿನೂತನವಾದ ಯೋಜನೆ ಇದಾಗಿದ್ದು, ಏಳು ವಿಯರ್‌ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ನೀರನ್ನು ಕೂಡ ಸಂಗ್ರಹ ಮಾಡಲಾಗಿದೆ ಎಂದರು.
ಕೆಲವೆಡೆ ಅರಣ್ಯ ಇಲಾಖೆ ಆಕ್ಷೇಪಗಳಿರುವುದರಿಂದ ನಾಲೆ ನಿರ್ಮಾಣಕ್ಕೆ ಅಡಚಣೆ ಆಗಿದೆ. ಆದ್ದರಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ. ಮುಂದಿನ ವರ್ಷ ಜಿಲ್ಲೆಯ ಅರಸೀಕೆರೆ ತಾಲೂಕು ಸೇರಿದಂತೆ ಏಳು ಜಿಲ್ಲೆಗಳಿಗೂ ನೀರು ಪೂರೈಕೆ ಮಾಡಲಾಗುವುದು. ಉಪಮುಖ್ಯಮಂತ್ರಿಗಳು ಎಲ್ಲಾ ಅಡಚಣೆಗಳನ್ನು ನಿವಾರಣೆ ಮಾಡಿದ್ದಾರೆ ಎಂದರು.
ಉಪಮುಖ್ಯಮಂತ್ರಿಗಳು ವೈಯಕ್ತಿಕ ಆಸಕ್ತಿ ವಹಿಸಿ ಈ ಯೋಜನೆಯನ್ನು ಈ ಹಂತಕ್ಕೆ ತಂದಿದ್ದಾರೆ. ಜಿಲ್ಲೆಯ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾರ್ಯಕ್ರಮಕ್ಕೆ ಏಳು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇವೆ. ಈ ಯೋಜನೆಯಿಂದ ನೀರಿನ ಅಗತ್ಯತೆ ಇರುವ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.
ಬಾಕಿ ಇರುವ ಕಾಮಗಾರಿಗಳನ್ನು ಅತಿ ತುರ್ತಾಗಿ ಮಾಡಿ ಮುಂದಿನ ವರ್ಷ ಏಳು ಜಿಲ್ಲೆಯ ಕೆರೆಗಳಿಗೆ ನೀರು ಹರಿಸುತ್ತೇವೆ. ಅಧಿಕಾರಿಗಳು ಜವಾಬ್ದಾರಿ ವಹಿಸಿ ಕೆಲಸ ಮಾಡಿದ್ದಾರೆ. ಗುತ್ತಿಗೆದಾರ ಕೂಡ ಕಷ್ಟದ ಪರಿಸ್ಥಿತಿಯಲ್ಲಿ ಯೋಜನೆ ಕಾಮಗಾರಿ ಮಾಡುತ್ತಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಯೋಜನೆಗೆ ದುಡಿದ ಎಲ್ಲರನ್ನೂ ಸನ್ಮಾನಿಸಿ ಗೌರವಿಸಲಾಗುವುದು ಎಂದರು.