ನಿಮ್ಮ ತಾತನಂತೆ ಬೆಳೆಯಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಸು: ನೂತನ ಸಂಸದ ಶ್ರೇಯಸ್ ಪಟೇಲ್ ಗೆ ಸಿಎಂ, ಡಿಸಿಎಂ ಆಶೀರ್ವಾದ

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದಿಸಿದ ಹಾಸನ ಕಾಂಗ್ರೆಸ್ ಮುಖಂಡರ ತಂಡ

ಹಾಸನ: ಎಲ್ಲರ ಪರಿಶ್ರಮದಿಂದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಜಿಲ್ಲಾ‌ ಕಾಂಗ್ರೆಸ್ ಮುಖಂಡರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕಿವಿ ಮಾತು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ನೂತನ ಸಂಸದ ಶ್ರೇಯಸ್ ಪಟೇಲ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರೊಂದಿಗೆ ತೆರಳಿ ಸಿಎಂ, ಡಿಸಿಎಂ ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರ ಪ್ರಯತ್ನವನ್ನು ಶ್ಲಾಘಿಸಿದ ಇಬ್ಬರೂ ಪಕ್ಷ ಸಂಘಟನೆಗೆ ಲೋಕಸಭೆ ಚುನಾವಣೆ ಪ್ರಚಾರದ ಮಾದರಿಯಲ್ಲೆ ಒತ್ತು ನೀಡುವಂತೆ ಸೂಚಿಸಿದರು.

ಶ್ರೇಯಸ್ ಪಟೇಲ್ ಅವರನ್ನು ಅಭಿನಂದಿಸಿದ ಅವರು, ನಿಮ್ಮ ತಾತ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದ ಕಡೆಯ ಸಂಸದರಾಗಿದ್ದರು. ಈಗ ಅವರ ಮೊಮ್ಮಗ ಆ ಸ್ಥಾನಕ್ಕೆ ಬಂದಿದ್ದೀಯ ಅವರಂತೆಯೇ ನಾಯಕನಾಗಿ ಬೆಳೆಯಬೇಕು. ನೀನಿನ್ನೂ ಯುವಕನಾಗಿರುವುದರಿಂದ ಉತ್ತಮ ಅವಕಾಶಗಳಿವೆ. ಪಕ್ಷದ ಎಲ್ಲರನ್ನೂ ಒಟ್ಟಾಗಿ ಮುನ್ನಡೆಸಬೇಕು ಎಂದು‌ ಕಿವಿಮಾತು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ , ಮಾಜಿ ಸಂಸದ ಹೆಚ್. ಕೆ. ಜವರೇಗೌಡ , ಮಾಜಿ ಸಚಿವ ಬಿ ಶಿವರಾಂ, ಮಾಜಿ ಎಮ್ಮೆಲ್ಸಿ ಎಂ.ಎ. ಗೋಪಾಲಸ್ವಾಮಿ ,ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಸಂಸದ ಶ್ರೇಯಸ್ ಅವರ ತಾಯಿ ಅನುಪಮಾ ಮಹೇಶ್ , ಮುಖಂಡರಾದ ಬನವಾಸೆ ರಂಗಸ್ವಾಮಿ , ಶ್ರೀಧರ್ , ಕೃಷ್ಣೇ ಗೌಡ, ಜಾವಗಲ್ ಮಂಜುನಾಥ್ , ಶಿವಕುಮಾರ , ಗಿರೀಶ್, ಸುರೇಶ್, ಲಕ್ಷ್ಮಣ್ ಮುಂತಾದವರು ಇದ್ದರು.