ಹಾಸನ: ನಗರದ ಅಧಿದೇವತೆ, ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದೇವಿಯ ದರ್ಶನೋತ್ಸವ ಇದೇ ತಿಂಗಳ 24 ರಿಂದ ನ.3 ರ ವರೆಗೆ ನಡೆಯಲಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಜಿಪಂ ಸಭಾಂಗಣದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಉತ್ಸವಕ್ಕಾಗಿ ಸಿದ್ಧತಾ ಕಾರ್ಯ ಶೇ.90ರಷ್ಟು ಮುಗಿದಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಉತ್ಸವವನ್ನು ಅದ್ದೂರಿ ಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಅಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಡಾ. ಶ್ರೀ ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಹಾಗೂ ತುಮಕೂರು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಉಪಸ್ಥಿತರಿರುವರು ಎಂದರು. ನ.3 ರ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ಶಾಸ್ರೋಕ್ತವಾಗಿ ಮುಚ್ಚಲಿದೆ ಎಂದು ಹೇಳಿದರು.
24 ಗಂಟೆಯೂ ದರ್ಶನ: ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅವಶ್ಯವಿ ರುವ ಮೂಲಭೂತ ಸೌಕರ್ಯಗಳಾದ ಮಳೆ- బిలి ನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ, ಬ್ಯಾರಿಕೇಡಿಂಗ್, ಫ್ಯಾನ್ಸ್, ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಹಿಂದಿಗಿಂತ ವಿಜೃಂಭಣೆಯಿಂದ ಈ ಬಾರಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತ ಹಾಗೂ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಅಲಂಕಾರ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದರು. ದೇವಾಲಯದ ಆವರಣದಲ್ಲಿ ಆಕರ್ಷಕ ಹೂವಿನ ಅಲಂಕಾರ ಮಾಡಲು ಲಾಲ್ ಬಾಗ್ ತಜ್ಞರ ಸಹಯೋಗ ಪಡೆಯಲಾಗಿದೆ. ಪ್ರತಿ 2 ದಿನಕ್ಕೆ ಒಮ್ಮೆ ಹೂವಿನ ಅಲಂಕಾರದ ಮಾದರಿ ಬದಲಾವಣೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.
ಫಲಪುಷ್ಪ ಪ್ರದರ್ಶನ: ಸಿಲ್ವರ್ ಜ್ಯುಬಿಲಿ ಪಾರ್ಕ್ ಆವರಣದಲ್ಲಿ ಜಿಲ್ಲೆಯ ಪ್ರವಾಸಿ ತಾಣ ಮತ್ತು ಇತರೆ ಮಾದರಿಗಳ ಆಕರ್ಷಕ ಫಲಪುಷ್ಪ ಪ್ರದರ್ಶನವನ್ನು ಅ.26 ರಿಂದ 29 ರವರೆಗೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಇದೆ, ಆದರೆ ಒಬ್ಬರು 10ರೂ. ಪಾವತಿಸಬೇಕು. ಮಕ್ಕಳಿಗೆ 5 ರೂ. ಸಮವಸ್ತ್ರ ದೊಂದಿಗೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದರು.
ಇಸ್ಕಾನ್ ತಂಡಕ್ಕೆ ಹೊಣೆ: ಭಕ್ತರಿಗೆ ಉತ್ತಮ ಗಣಮಟ್ಟದ ಲಡ್ಡು-ಪ್ರಸಾದವನ್ನು ಇಸ್ಕಾನ್ ತಂತ್ರಜ್ಞಾನದೊಂದಿಗೆ ಂದಿಗೆ ಸ್ಥಳೀಯವಾಗಿ ಹಾಸನದಲ್ಲಿಯೇ ತಯಾರಿಸಿ ವಿತರಿಸಲಾಗುವುದು. ಜೊನ್ನೆ ಪ್ರಸಾದ ಪೂರೈಕೆಗೂ ಇಸ್ಕಾನ್ ಸಹಯೋಗ ಪಡೆಯಲಾಗಿದೆ. ಲಡ್ಡು ತಯಾರಿಸಲು ಸ್ಥಳೀಯ ನಂದಿನಿ ತುಪವನ್ನೇ ಬಳಸಲಾಗುವುದು.
1000 ರೂ.ಟಿಕೆಟ್ ಪಡೆದು ನೇರ ದರ್ಶನ ಪಡೆಯುವವರಿಗೆ 2 ಲಾಡುಗಳನ್ನು ಉಚಿತವಾಗಿ ನೀಡಲಾಗುವುದು. 300 ರೂ. ಟಿಕೆಟ್ ಪಡೆದು ವಿಶೇಷ ದರ್ಶನ ಮಾಡುವವರಿಗೆ 1 ಲಡ್ಡು ಉಚಿತವಾಗಿ ನೀಡಲಾಗುವುದು ಎಂದರು. ಈ ಬಾರಿ ಶುಚಿತ್ವ ಮತ್ತು ಗುಣಮಟ್ಟಕ್ಕೆ ಒತ್ತು ನೀಡಲಾಗುವುದು, ಯಾವುದೇ ಗೊಂದಲ, ನೂಕು ನುಗ್ಗಲು ಉಂಟಾಗದಂತೆ ವಿತರಣೆ ಮಾಡಲು 24 ಕೌಂಟರ್ ತೆರೆಯಲಾಗಿದೆ ಎಂದರು.