ಡಿಸಿ ಸತ್ಯಭಾಮ ಪರ ಬ್ಯಾಟ್ ಬೀಸಿದ ಸಚಿವ ರಾಜಣ್ಣ; ಬಡವರ ಪರವಾದ ಅಧಿಕಾರಿ ಮೇಲೆ ಆರೋಪ ಹೊರಿಸುವುದು ಶೋಭೆ ತರಲ್ಲ

ಹಾಸನ: ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿರುದ್ಧ ಚುನಾವಣಾ ಆಯೋಗಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ರ ಬರೆದು ವರ್ಗಾವಣೆ ಮಾಡುವಂತೆ ಕೋರಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಖಂಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಸಿ.ಸತ್ಯಭಾಮ ಪರವಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬ್ಯಾಟ್ ಮಾಡಿದರು.

ಪತ್ರ ಬರೆಯುವುದು ಅವರಿಗೆ ಬಿಟ್ಟದ್ದು ಆದರೆ ಆರೋಪಗಳನ್ನು ಮಾಡ್ತಾರಲ್ಲ ಅದನ್ನು ಖಂಡಿಸುತ್ತೇನೆ. ಸರ್ಕಾರಿ ನೌಕರರು ಸದಾಭಿಪ್ರಾಯ ಹೊಂದಿರುತ್ತಾರೆ. ಒಂದು ಪಕ್ಷದ ಬಗ್ಗೆ ಒಬ್ಬೊಬ್ಬರು ಅಭಿಪ್ರಾಯ ಇಟ್ಟುಕೊಂಡಿರುತ್ತಾರೆ. ಆದರೆ ಒಬ್ಬ ಅಧಿಕಾರಿ ಮೇಲೆ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸುತ್ತೇನೆ ಎಂದರು.

ಸತ್ಯಾಂಶ ಇದ್ದರೆ ಬೇರೆ ವಿಚಾರ, ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಂದಾಗ ನಮ್ಮ ಸರ್ಕಾರ ಈ ರೀತಿ ಯೋಜನೆಗಳನ್ನು ತಂದಿದೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ?

ಇವರು ಪ್ರಧಾನಮಂತ್ರಿ, ಮುಖ್ಯಮಂತ್ರಿ ಇದ್ದಾಗ, ಯಾವ ಜಿಲ್ಲೆಗೆ ಹೋದರೂ ಅಲ್ಲಿನ ಜಿಲ್ಲಾಧಿಕಾರಿಗಳು ನಮ್ಮ ಸರ್ಕಾರ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪತ್ರದಲ್ಲಿ ಬರೆದಿರುವ ಆರೋಪಗಳು ಸತ್ಯಕ್ಕೆ ದೂರುವಾದವು ಎಂದರು.

ವಿನಾಕಾರಣ ಬಡವರಪರ ಕೆಲಸ ಮಾಡುವ ಒಬ್ಬ ಅಧಿಕಾರಿಯ ಮೇಲೆ ಆರೋಪ ಮಾಡುವುದು ಯಾರಿಗೂ ಶೋಭೆ ತರಲ್ಲ ಎಂದರು.