ಸಿಎಂ ಸಿದ್ದುಗೆ ಉಸ್ತುವಾರಿ ಸಚಿವ ರಾಜಣ್ಣ ಬೇಡಿಕೆ

ಹಾಸನ : ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆ ಮೊದಲ ಹಂತ-೧ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸಿಎಂ ಸಿದ್ದರಾಮಯ್ಯ ಅವರಿಗೆ ಮುಂದುವರೆದ ಎತ್ತಿನಹೊಳೆ ಯೋಜನೆಗೆ ಹಣಕಾಸು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಹಂತ-೧ ಪೂರ್ಣಗೊಳ್ಳಲು ಹಲವು ವರ್ಷ ಕಳೆದಿದೆ.ವೀರಪ್ಪಮೊಯ್ಲಿ ಅವರು ಈ ಯೋಜನೆಗೆ ಒತ್ತು ನೀಡಿದ್ರು.ತದನಂತರ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು ಎಂದರು.

ಪಶ್ಚಿಭಿಮುಖವಾಗಿ ಹರಿಯುವ ನೀರನ್ನು ಪೂರ್ವಾಭಿಮುಖವಾಗಿ ಹರಿಸುವುದು ದೇಶದಲ್ಲೇ ಮೊದಲು. ಇದಕ್ಕೆ ಹಲವಾರು ಅಧಿಕಾರಿಗಳು ಶ್ರಮ ಪಟ್ಟಿದ್ದಾರೆ.ಅರಣ್ಯ ಇಲಾಖೆಯಿಂದ ಕೆಲವು ತೊಂದರೆಗಳಿಂದ ಯೋಜನೆ ಪೂರ್ಣ ಮಾಡಲು ಆಗುತ್ತಿಲ್ಲ.ಐದಳ್ಳ ಕಾವಲು ಬಳಿ ಭೂಮಿ ನೀಡಿಲ್ಲ ಇಲ್ಲದಿದ್ದರೆ ಅರಸೀಕೆರೆಗೆ ನೀರು ಹರಿಯುತ್ತಿತ್ತು ಎಂದರು.

ಕೂಡಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಯೋಜನೆ ಪೂರ್ಣಗೊಳಿಸಬೇಕು.ಈಗಾಗಲೇ ಸಾಕಷ್ಟು ಹಣ ಖರ್ಚಾಗಿದೆ ವರ್ಷಕ್ಕೆ ಎರಡು ಸಾವಿರ ಕೋಟಿ ಕೊಟ್ಟರೆ ಯೋಜನೆ ಪೂರ್ಣಗೊಳಿಸಬಹುದು.ಸಮುದ್ರಕ್ಕೆ ಸೇರುವ ನೀರನ್ನು ಕುಡಿಯುವ ನೀರು ಅಭಾವ ಇರುವ ಜಿಲ್ಲೆಗಳಿಗೆ ಹರಿಸಬಹುದು ಎಂದು ತಿಳಿಸಿದರು.

ಸಣ್ಣಪುಟ್ಟ ಸಮಸ್ಯೆಗಳನ್ನು ಮನಗಂಡು ಡಿ.ಕೆ.ಶಿವಕುಮಾರ್ ಎಲ್ಲವನ್ನು ನಿವಾರಣೆ ಮಾಡಿದ್ದಾರೆ.ಬಯಲುಸೀಮೆಯ ಜಿಲ್ಲೆಗಳ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 23 ಭಾಗಗಳಲ್ಲಿ ಅರಣ್ಯ ಇಲಾಖೆ ತೊಂದರೆ ಇದೆ. ಮುಖ್ಯಮಂತ್ರಿಗಳು ಅರಣ್ಯ ಇಲಾಖೆಗೆ ಸೂಚನೆ ನೀಡುವುದರ ಜತೆಗೆ ಹಣಕಾಸು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.