ಸರ್ಕಾರಿ ಶಾಲೆ ಗಣಿತ ಶಿಕ್ಷಕಿಯಾದ ಜಿಲ್ಲಾಧಿಕಾರಿ ಸತ್ಯಭಾಮ!

ಆಲೂರು ತಾಲ್ಲೂಕಿನ ಗಂಜಿಗೆರೆ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ ಡಿಸಿ

ಆಲೂರು: ಕಚೇರಿಯಲ್ಲಿ ನಿರಂತರ ಸಭೆ, ಪ್ರಗತಿ ಪರಿಶೀಲನೆ, ಸಮಸ್ಯೆಗೆ ಪರಿಹಾರ ಕಲ್ಪಿಸುವುದಷ್ಟೇ ಜಿಲ್ಲಾಧಿಕಾರಿ ಕೆಲಸ ಅಲ್ಲ ಎಂಬುದನ್ನು ಸಾಬೀತುಪಡಿಸಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಶುಕ್ರವಾರ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕಿಯಾಗಿ ಪಾಠ ಮಾಡಿದರು.

ತಾಲ್ಲೂಕಿನ ಗಂಜಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್‌ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಕೆಲ ಸಮಯ ಕಳೆದರು.

ಮಕ್ಕಳ ನೋಟ್‌ ಪುಸ್ತಕ ಹಿಡಿದು ಗಣಿತ ಲೆಕ್ಕಗಳ ಕುರಿತು ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳು ಉತ್ತರಿಸಲು ತಡವರಿಸಿದಾಗ ಶಿಕ್ಷಕಿಯಾಗಿ ಸಲಹೆ ನೀಡಿದರು. ಜಿಲ್ಲಾಧಿಕಾರಿ ಅವರು ಶಾಲೆಗೆ ಬಂದಿದ್ದಕ್ಕೆ ಮಕ್ಕಳು ಖುಷಿಪಟ್ಟರು.

ಶಾಲೆಯ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಗಣಿತ ವಿಷಯ ಬೋಧಕರು ಇನ್ನಷ್ಟು ಪರಿಣಾಮಕಾರಿಯಾಗಿ ಪಾಠ ಮಾಡಬೇಕೆಂದು ಸೂಚಿಸಿದರು. ಶಾಲಾ ಆಟದ ಮೈದಾನ ಬಳಸಿಕೊಂಡು ಮಕ್ಕಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲೂ ತೊಡಗಿಕೊಳ್ಳಬೇಕು. ಶಾಲೆಯಲ್ಲಿ ಅಡುಗೆ ಕೆಲಸದವರು ಇಲ್ಲ ಎನ್ನುವುದು ತಪ್ಪು. ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.

ಶಾಲಾ ಕಾಂಪೌಂಡ್‌ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ  ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ  ವೈದ್ಯರು ಹಾಗೂ ನರ್ಸ್‌ ಕರ್ತವ್ಯ ಸ್ಥಳದಲ್ಲಿ  ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ, ಸಂಬಂಧಪಟ್ಟವರಿಗೆ ನೊಟೀಸ್‌‍ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ ಅವರಿಗೆ ಸೂಚಿಸಿದರು.

ನಂತರ ತವರಿನ ಸಂಧ್ಯಾ ದೀಪ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವೃದ್ಧರ ಕುಶಲೋಪರಿ ವಿಚಾರಿಸಿದರು. ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.