ಹಾಸನ ಲೋಕಸಭಾ ಕ್ಷೇತ್ರಕ್ಕೆ ಯಾವತ್ತು ಚುನಾವಣೆ? ಚುನಾವಣಾ ಪ್ರಕ್ರಿಯೆ ವೇಳಾಪಟ್ಟಿ ಇಲ್ಲಿದೆ

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿ ಸತ್ಯಭಾಮ

ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾ.28 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 4 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, 5 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ‌ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿವೆ ಎಂದರು.

ಜಿಲ್ಲೆಯ ಒಟ್ಟು ಮತದಾರರು 17,24,908 ಅದರಲ್ಲಿ ಪುರುಷರು ಮತದಾರರು-8,58,661, ಮಹಿಳಾ ಮತದಾರರು-8,66,206, ಇತರೆ ಮತದಾರರ ಸಂಖ್ಯೆ 41 ಆಗಿದ್ದು, ಒಟ್ಟು 2221ಮತಗಟ್ಟೆಗಳು ಸ್ಥಾಪನೆ ಆಗಲಿವೆ.

ಹಾಸನ ಜಿಲ್ಲೆಯ ಗಡಿ ಭಾಗಗಳಲ್ಲಿ ಒಟ್ಟು 22 ಚೆಕ್‌ಪೋಸ್ಟ್ ಹಾಗೂ ಕಡೂರು ಗಡಿ ಭಾಗದಲ್ಲಿ 6 ಸೇರಿ ಒಟ್ಟು 28 ಚೆಕ್‌ಪೋಸ್ಟ್ ತೆರೆಲಾಗುವುದು. ಇಂದಿನಿಂದಲೇ ನೀತಿಸಂಹಿತೆ ಜಾರಿಯಾಗಿದೆ ಎಂದರು.