ಚೆಕ್ ಪೋಸ್ಟ್ ಗಳಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ; ವಾಹನಗಳ ಬದಲು ಮೊಬೈಲ್ ಚೆಕ್ ಮಾಡಿಕೊಂಡು ಕುಳಿತಿದ್ದ ಸಿಬ್ಬಂದಿಗೆ ನೋಟಿಸ್

ಡಿಸಿ ಭೇಟಿ ಅರಿವಿಲ್ಲದೇ ಕುಳಿತಿದ್ದ ಸಿಬ್ಬಂದಿಗೆ ಶಾಕ್!

ಹಾಸನ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಜಿಲ್ಲೆಯ ಗಡಿಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ ಸತ್ಯಭಾಮ 8 ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಯನ್ನು ಕಟ್ಟುನಿಟ್ಟಾಗಿ ನಡೆಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚನ್ನರಾಯಪಟ್ಟಣ, ಅರಕಲಗೂಡು ತಾಲೂಕಿನ ಗಡಿ ಭಾಗಗಳಿಗೆ ದಿಢೀರ್ ಭೇಟಿಯಿತ್ತ ಜಿಲ್ಲಾಧಿಕಾರಿ, ಕೆಲ ಹೊತ್ತು ದೂರದಲ್ಲಿ ನಿಂತು ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುವವರ ಕಾರ್ಯವೈಖರಿ ವೀಕ್ಷಿಸಿದಾಗ, ಕೆಲ ಸಿಬ್ಬಂದಿ ವಾಹನ ತಪಾಸಣೆ ಮಾಡುವ ಬದಲಾಗಿ ತಮ್ಮ ಮೊಬೈಲ್‌ಗಳನ್ನು ನೋಡುತ್ತಾ ಕುಳಿತಿದ್ದರು. ವಾಹನಗಳು ತಪಾಸಣೆಗೊಳಪಡದೇ ಓಡಾಡುತ್ತಿದ್ದವು.

ತಕ್ಷಣವೇ ಅವರಿಗೆ ನೋಟಿಸ್ ಜಾರಿ ಮಾಡಿ, ಮುಂದೆ ಈ ರೀತಿಯ ತಪ್ಪುಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆಗೆ ಈಗಾಗಲೇ ನೀತಿಸಂಹಿತೆ ಜಾರಿಯಾಗಿದ್ದು ಜಿಲ್ಲಾದಂತ 22 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ.