ಗುಡ್ಡಕುಸಿತ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಬಂದ್; ಬದಲಿ ಮಾರ್ಗ ಬಳಸಲು ಡಿಸಿ ಸೂಚನೆ

ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಮಾರ್ಗದಲ್ಲಿ ಭಾರಿ ಗುಡ್ಡ ಕುಸಿತ ಸಂಭವಿಸಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದ್ದು ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ‌ ಸೂಚಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲು ಬಳಿ ಗುಡ್ಡ ಕುಸಿದಿರುವುದರಿಂದ ಮಣ್ಣಿನಡಿ ಸಿಲುಕಿರುವ ಎರಡು ಕಂಟೇನರ್ ಹಾಗೂ ಟ್ಯಾಂಕರ್ಗಳನ್ನು ಹೊರತೆಗೆಯಲು ಮಣ್ಣು ತೆರವುಗೊಳಿಸುವವರೆಗೂ ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿರಲಿದೆ.

ಮಳೆ‌ ಸುರಿಯುತ್ತಿರುವುದರಿಂದ ಮತ್ತೆ ಭೂಕುಸಿತದ ಆತಂಕವಿದೆ. ಈ ಕಾರಣದಿಂದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕು. ತುರ್ತು ಸಂದರ್ಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂ.ಸಂ. 08172-261111 ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1077 ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.