ಹಾಸನ: ನಗರದ ನಾಗರಿಕರಿಗೆ ಶುಭಸುದ್ದಿಯೊಂದು ಇಲ್ಲಿದೆ, ಹೊಸ ಬಸ್ ನಿಲ್ದಾಣ ರಸ್ತೆಯ ರೈಲ್ವೆ ಮೇಲ್ಸೇತುವೆ ಇಂದು ಸಂಜೆಯಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸಿದ್ಧತೆ ನಡೆಸಿದ್ದಾರೆ.
ಹೌದು, ಈ ಸಂಬಂಧ ಕನ್ನಡಪೋಸ್ಟ್.ಇನ್ ಜತೆ ಮಾತನಾಡಿದ ಡಿಸಿ, ಸಾರ್ವಜನಿಕರ ಹಿತದೃಷ್ಟಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳಿಸುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರಸಭೆ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಇಂದು ಸಂಜೆ ಅಥವಾ ಮಂಗಳವಾರ ಬೆಳಗ್ಗೆ ಆದೇಶ ಹೊರಡಿಸಲಾಗುವುದು ಎಂದರು.
ರೈಲ್ವೆ ಮೇಲ್ಸೇತುವೆ ಸಿದ್ಧಗೊಂಡರೂ ವಾಹನ ಸಂಚಾರಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತ ವಾಗಿತ್ತು. ಈ ಸಂಬಂಧ ಹಲವು ಮುಖಂಡರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು.
ಅಲ್ಲದೇ ರೈಲ್ವೆ ಕ್ರಾಸಿಂಗ್ ನಲ್ಲಿ ತೀವ್ರ ವಾಹನ ದಟ್ಟಣೆಯಿಂದ ಜನರ ಪರದಾಟವೂ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಮ್ಮ ಅಧಿಕಾರ ದಂಡ ಬಳಸಲು ಮುಂದಾಗಿದ್ದು, ಕಾನೂನು-ಸುವ್ಯವಸ್ಥೆ ಪಾಲನೆ ನೆಪ ಮುಂದಿಟ್ಟು ಮೇಲ್ಸೇತುವೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ.