ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ವೇಣುಗೋಪಾಲ್ ರಾಜೀನಾಮೆ; ಕಾಂಗ್ರೆಸ್ ಪರ ಪ್ರಚಾರಕ್ಕೆ ಒಪ್ಪದೇ ಪಕ್ಷನಿಷ್ಠೆ ಉಳಿಸಿಕೊಂಡೆ ಎಂದ ವೇಣು!

ಹಾಸನ: ಬಿಜೆಪಿಯೊಳಗಿನ ಪ್ರಜ್ವಲ್ ರೇವಣ್ಣ ವಿರೋಧಿ ಬಣದೊಳಗಿನ ತಿಕ್ಕಾಟದಿಂದ ಬೇಸತ್ತು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆರ್.ಎಸ್.ಎಸ್. ಹಿನ್ನೆಲೆಯ ವೇಣುಗೋಪಾಲ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಮಾಧಾನಪಟ್ಟುಕೊಂಡಿದ್ದರು.

ಅವರು ಇಂದು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿರುವುದು ಬಿಜೆಪಿಯೊಳಗಿನ ಸಿದ್ಧಾಂತ ಹಾಗೂ ಪ್ರಜ್ವಲ್ ವಿರೋಧಿ ನಿಲುವುಗಳ‌ ನಡುವಿನ ತಿಕ್ಕಾಟ ತಾರಕಕ್ಕೇರಿರುವುದರ ಪ್ರತೀಕವಾಗಿದೆ.

ನನಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಬೇಕು ಎನ್ನುವ ತೀವ್ರ ಒತ್ತಡವಿತ್ತು. ಆದರೆ ನಾನು ಬಿಜೆಪಿಗೆ ನಿಷ್ಠನಾಗಿ ಉಳಿಯಲು ನಿರ್ಧರಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ.

-ಎಸ್.ಕೆ.ವೇಣುಗೋಪಾಲ್