ಹಾಸನ: ಬೇಲೂರು ತಾಲೂಕು ಕಾಂಗ್ರೆಸ್ ಘಟಕದಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಸ್ವ ಪಕ್ಷದ ಮುಖಂಡರ ವಿರುದ್ಧವೇ ಮಾಜಿ ಸಚಿವ ಬಿ.ಶಿವರಾಮು ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ನಿನ್ನೆ ಬೇಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಿಗದಿತ ಸಮಯಕ್ಕೆ ಕಾಂಗ್ರೆಸ್ ಕಚೇರಿಗೆ ಬಾರದ ಬಗ್ಗೆ ಬಿ. ಶಿವರಾಮು ತಮ್ಮ ಭಾಷಣದಲ್ಲಿ ಅಸಮಾಧಾನ ಹೊರಹಾಕಿದರು.
ಅಭ್ಯರ್ಥಿ ಎಷ್ಟೊತ್ತಿಗೆ ಬರ್ತಾರೋ, ಬಿಡ್ತಾರೋ, ಚುನಾವಣೆ ಅಂತು ನಡೆಯುತ್ತೆ ತಾನೇ? ಚುನಾವಣೆ ನಡೆದರೆ ನಮ್ಮ ಕೆಲಸ ಏನು? ನಾವು ಪ್ರಚಾರ ಮಾಡಲೇಬೇಕು.
ಅಭ್ಯರ್ಥಿ ಮೊದಲು ಬಂದು ನಿಮ್ಮ ಹತ್ತಿರ ಮನವಿ ಮಾಡಿಕೊಳ್ಳಬೇಕು. ಇದನ್ನು ನಾವು ಸಾಮಾನ್ಯವಾಗಿ ನಿರೀಕ್ಷೆ ಮಾಡ್ತಿವಿ. ಕೆಲವರಿಗೆ ಅಭ್ಯರ್ಥಿ ಫೋನ್ ಮಾಡಿದ್ದರಂತೆ ನಿಮ್ಮನ್ನು ನೋಡಬೇಕು ಅಂತ. ಎಷ್ಟು ಜನರನ್ನು ಮನೆಗೆ ಹೋಗಿ ನೋಡಲು ಆಗುತ್ತೆ? ಎಂದು ಶ್ರೇಯಸ್ ಪಟೇಲ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನನ್ನನ್ನು ನೋಡಲು ಬೆಂಗಳೂರಿಗೆ ಬರ್ತಿನಿ ಅಂದ್ರು, ಬೇಡ ನಾನೇ ಕ್ಷೇತ್ರದಲ್ಲಿ ಇರ್ತಿನಿ ಅಲ್ಲಿಗೆ ಬಂದು ಬಿಡಿ ಅಂದೆ. ಯಾರ‌್ಯಾರು ಕಾಂಗ್ರೆಸ್ ಕಚೇರಿಗೆ ಬರಬೇಕು ಅಂತರೋ ಆ ಕಾರ್ಯಕರ್ತರನ್ನೆಲ್ಲಾ ಸಾಮೂಹಿಕವಾಗಿ ಕರೆಸುತ್ತೇನೆ ಎಂದೆ. ನೀವು ಅಲ್ಲೇ ಬಂದು ಒಂದು ಗಂಟೆ ಇದ್ದು ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗಿ ಎಂದು ಹೇಳಿದ್ದೆ.
ಕರೆಕ್ಟಾಗಿ ಬಂದರೆ ಎಲ್ಲಾ ಕೆಲಸ ಆಗುತ್ತಿತ್ತು, ಎಲ್ಲೆಲ್ಲಿ ಹೋಗಿದ್ದಾರೋ? ಇನ್ನೂ ಬರದೆ ಇರುವವರು ಕೆಲವರು ಇರ್ತಾರಲ್ಲಾ ಅವರನ್ನು ನೋಡಬೇಕು. ಎಲ್ಲಾ ಚುನಾವಣೆಯಲ್ಲೂ ಇನ್ನೊಂದು ಗುಂಪು ಕಲೆಕ್ಷನ್‌ಗೆ ಕಾಯ್ತಾ ಇರುತ್ತೆ. ಅದು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದರು.
ಅವರು ಇಷ್ಟೊತ್ತಿಗೆ ರೇವಣ್ಣ ಅವರ ಹತ್ತಿರ ಮಾತನಾಡಿಕೊಂಡು ಬಂದಿರ್ತಾರೆ. ಅವನು ಸರಿಯಿಲ್ಲ, ಇವನು ಸರಿಯಿಲ್ಲ, ನಾವು ನಿಮ್ಮಪರವಾಗಿ ಕೆಲಸ ಮಾಡ್ತಿವಿ ಎನ್ನುವವರನ್ನು ಕಳೆದ ಬಾರಿ ನೋಡಿದ್ದೇವೆ.
ಎಲ್ಲೆಲ್ಲೆ ಹಣ ಇಸ್ಕಂಡು ಯಾರ ಪರವಾಗಿ ಕೆಲಸ ಮಾಡಿದರು ಎಂದು.
ಕಾಂಗ್ರೆಸ್ ನಿಂದ ಪ್ರಾರಂಭ ಮಾಡಿ, ಜೆಡಿಎಸ್ ಗೆ ಹೋಗಿ, ಅಲ್ಲಿಂದ ಬಿಜೆಪಿಗೆ ಬಂದು ಮುಗ್ಸಿದ್ರು. ಈಗ ನಮ್ಮ ಅಭ್ಯರ್ಥಿಗೆ ಎಚ್ಚರಿಕೆಯಿಂದ ಇರಿ ಅಂತ ಹೇಳಬೇಕು.
ಯಾರು ಕೆಲಸ ಮಾಡುವುದಿಲ್ಲವೋ, ಕಚೇರಿಗೆ ಬರುವುದಿಲ್ಲವೋ, ಅವರು ಯಾವುದಕ್ಕೂ ಬೇಕಾದರೂ ರೆಡಿ ಇರ್ತಾರೆ. ಈ ಬಾರಿ ಎರಡೇ ಪಾರ್ಟಿ ಕಣದಲ್ಲಿರುವುದರಿಂದ ಹುಷಾರಾಗಿ ನೋಡ್ಕಳಿ ಅಂತ ಹೇಳೋಣ.
ಅವರಿಗೆ ಎಚ್ಚರಿಕೆ ಕೊಡಬೇಕು ಅಷ್ಟೇ, ಇದರ ಮೇಲೆ ಅವರ ಇಷ್ಟ. ಕೊಡೋರು ಅವರು, ಇಸ್ಕಳೋರು ಅವರು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದರು.