ಜೆಡಿಎಸ್ ರಾಜಕೀಯವಾಗಿ ಮಾತಿಗೆ ತಪ್ಪದ ಪಕ್ಷ, ಯಾವಾಗ ಯಾರ್ಯಾರನ್ನು ಭೇಟಿ ಮಾಡ್ತಾರೋ ನನಗೆ ಮಾಹಿತಿ ಇಲ್ಲ; ಮಿತ್ರಪಕ್ಷದ ಕಾಲೆಳೆದ ಪ್ರೀತಂ ಜೆ.ಗೌಡ

ಪ್ರಜ್ವಲ್ ಎನ್.ಡಿ.ಎ. ಅಭ್ಯರ್ಥಿ ಎಂದು ಹಿರಿಯರು ಎಲ್ಲಿಯೂ ಹೇಳಿಲ್ಲ ಎಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಹಾಸನ: ಜೆಡಿಎಸ್ ರಾಜಕೀಯವಾಗಿ ಮಾತಿಗೆ ತಪ್ಪದ ಪಕ್ಷ, ಅದರ ನಾಯಕರು ಯಾವಾಗ್ಯಾವಾಗ ಯಾರುಯಾರನ್ನು ಭೇಟಿ ಮಾಡ್ತಾರೊ‌ ನನಗೆ ಮಾಹಿತಿ ಇಲ್ಲ ಎಂದು‌ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ, ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೇಟಿ ಕುರಿತು ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯಾರೋ ಒಬ್ಬ ವ್ಯಕ್ತಿ ಯಾರನ್ನೊ‌ ಭೇಟಿಯಾದ ಬಗ್ಗೆ ಮಾತನಾಡಲ್ಲ. ಬಹುಶಃ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ, ನೀರಾವರಿ ವಿಚಾರಕ್ಕೆ ಹೋಗಿರಬಹುದು ಎನ್ನುವುದು ನಮ್ಮ ಭಾವನೆ ಅದನ್ನು ಮೀರಿ ಬೇರೆ ಏನಾದರೂ ಇದ್ದರೆ ಅದನ್ನು ಅವರೇ ಹೇಳಬೇಕು. ಅವರು ಮೋದಿಯವರನ್ನು ಭೇಟಿಯಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ. ಹಾಗಾಗಿ ಅವರು ಬೇರೆ ಯೋಚನೆ ಮಾಡೋದಿಲ್ಲ ಎನ್ನುವ ನಂಬಿಕೆ ಇದೆ. ಅವರು ಹಿಂದೊಂದು, ಮುಂದೊಂದು ಮಾಡೋದಿಲ್ಲ ಎಂದು ಪರೋಕ್ಷವಾಗಿ ಕಾಲೆಳದರು.

ನಿನ್ನೆ ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಆಗಿದೆ. ಮುಂದಿನ ತಿಂಗಳು ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದೆ, ಕಾರ್ಯಕರ್ತರ ಭಾವನೆ ಆಧರಿಸಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಅಂತಿಮ ಆಗಲಿದೆ. ರಾಜ್ಯದ ತಂಡ ಕಾರ್ಯಕರ್ತರ ಭಾವನೆ ಆಲಿಸಿ ತೀರ್ಮಾನ ಮಾಡಲಿದೆ ಎಂದರು.

ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ಅವರೇ ಮುಂದಿನ ಅಭ್ಯರ್ಥಿ ಎಂದು ಘೋಷಣೆ ಮಾಡಿ ದೇವೇಗೌಡರು ಪ್ರಚಾರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿಗಳು ಹಿರಿಯರು, ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕು, ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬುದಕ್ಕೆ ಅವರ ಬದ್ದತೆ ಇದೆ. ಎನ್.ಡಿ.ಎ ಅಭ್ಯರ್ಥಿ ಗೆಲ್ಲಬೇಕೆಂದು ಜಿಲ್ಲಾ ಪ್ರವಾಸ ಮಾಡಿದ್ದಾರೆ. ಹಾಸನ ಕ್ಷೇತ್ರ ಜೆಡಿಎಸ್‌ಗೆ ಹಂಚಿಕೆಯಾದರೆ ಪ್ರಜ್ವಲ್ ಅಭ್ಯರ್ಥಿ ಆಗ್ತಾರೆ ಎಂದು ಅವರು ಮತ ಕೇಳಿದ್ದಾರೆ. ಅದು ಸ್ವಾಭಾವಿಕ ಆದರೆ ಪ್ರಜ್ವಲ್ ಎನ್.ಡಿ.ಎ. ಅಭ್ಯರ್ಥಿ ಎಂದು ಹಿರಿಯರು ಎಲ್ಲಿಯೂ ಹೇಳಿಲ್ಲ. ಅವರಿಗೂ ರಾಜಕೀಯ ಅನುಭವ ಇದೆ ಎನ್ನುವ ಮೂಲಕ ಪ್ರಜ್ವಲ್‌ ರೇವಣ್ಣ ಎನ್.ಡಿ.ಎ.ಅಭ್ಯರ್ಥಿ ಎನ್ನವುದನ್ನು ಮತೊಮ್ಮೆ ಪರೋಕ್ಷವಾಗಿ ಹೇಳಿದರು.

ಎನ್.ಡಿ.ಎ. ಅಭ್ಯರ್ಥಿ ಯಾರೆಂದು ಸೀಟು ಹಂಚಿಕೆ ವೇಳೆಯಲ್ಲಿ ತೀರ್ಮಾನ ಆಗಲಿದೆ. ಹಾಸನಕ್ಕೆ ಅವರಿಗೆ ಸೀಟ್ ಕೊಡುವುದೇ ಇಲ್ಲ ಎನ್ನುವುದಿಲ್ಲ. ಆದರೆ ಕೊಟ್ಟಿದ್ದಾರೆ ಎನ್ನುವ ಮಾತು ಸತ್ಯ ಅಲ್ಲ, ಅದು ಚರ್ಚೆ ಹಂತದಲ್ಲಿ ಇದೆ. ಯಾರಿಗೆ ಈ ಕ್ಷೇತ್ರ ಎಂದು ಹಿರಿಯರು ತೀರ್ಮಾನ ಮಾಡ್ತಾರೆ. ನಾವು ಅಭ್ಯರ್ಥಿ ಆಗಬೇಕು ಎಂದರೆ ಜೆಡಿಎಸ್ ಅಭಿಪ್ರಾಯ ಕೇಳುತ್ತೇವೆ. ಅವರು ಅಭ್ಯರ್ಥಿ ಆಗುವುದಾದರೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಗೆಲುವೇ ಇಲ್ಲಿ ಮಾನದಂಡವಾಗಿರುತ್ತದೆ. ಅಂತಿಮವಾಗಿ ಎಲ್ಲಾ ಕ್ಷೇತ್ರ ಗೆಲ್ಲಬೇಕು ಎನ್ನೋದು ನಮ್ಮ ಗುರಿ ಎಂದರು.