ಹಾಸನ: ಎರಡು ಪುಂಡಾನೆಗಳನ್ನು ಸೆರೆ ಹಿಡಿದಿದ್ದರೂ ಬೇಲೂರು ತಾಲೂಕಿನಲ್ಲಿ ಆನೆ ದಾಳಿ ಮುಂದುವರಿದಿದ್ದು ಇಂದು ತೋಟ ಕಾರ್ಮಿಕರೊಬ್ಬರು ಕಾಡಾನೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೇಲೂರು ತಾಲ್ಲೂಕಿನ ನಂದಗೊಂಡನಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ (52) ಎಂಬವರ ಮೇಲೆ ಏಕಾಏಕಿ ದಾಳಿ ನಡೆಸಿದ ಕಾಡಾನೆಯೊಂದು ಅವರನ್ನು ಸೊಂಡಲಿನಿಂದ ಎತ್ತಿ ಬಿಸಾಡಿದ ಪರಿಣಾಮ ಗಂಭೀರ ಗಾಯಗಳಾಗಿವೆ.

ಘಟನೆಯ ವಿವರ: ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ನಾಲ್ಕು ಕಾಡಾನೆಗಳ ಹಿಂಡು ಇರುವುದು ತಿಳಿಯದೆ ಮಂಜುನಾಥ್ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ದಿಢೀರ್ ದಾಳಿಗೆ ಒಳಗಾದ ಅವರಿಗೆ ಸೊಂಟ, ಕೈ ಮತ್ತು ಕಾಲು ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಗಾಯಾಳುವನ್ನು ತಕ್ಷಣ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಎರಡು ಕಾಡಾನೆಗಳನ್ನು ಸೆರೆಹಿಡಿದರೂ ಉಪಟಳ ಮುಂದುವರಿದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಧಾವಿಸಿದ್ದಾರೆ. ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಡಾನೆಗಳ ದಾಳಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.