ಹಾಸನ: ಬಿಜೆಪಿ ಪರ ಸಂದೇಶ ಹೊಂದಿದ ಮೆಸೇಜ್ ಹಂಚಿಕೊಂಡ ಆರೋಪ ಹೊತ್ತಿದ್ದ ಹಾಸನದ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಿ.ಎಚ್.ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ.
ಪ್ರೀತಂಜೆ.ಗೌಡ ಹಾಸನ ಎಂಎಲ್‌ಎ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಚುನಾವಣೆ ಪ್ರಚಾದ ಸಂದೇಶ ಕಳುಹಿಸಿದ್ದ ಬಗ್ಗೆ ಅವರ ಬಗ್ಗೆ ನಾಗೇಂದ್ರ ರಾಮ ಎಂಬವರು ದೂರು ಸಲ್ಲಿಸಿದ್ದರು.
ಡಿಡಿಪಿಐಗೆ ಈ ಸಂಬಂಧ ಪರಿಶೀಲಿಸಿ 24 ಗಂಟೆಯೊಳಗೆ ಮಾಹಿತಿ ಒದಗಿಸಿ ಎಂದು ಎಡಿಸಿ ಶಾಂತಲಾ ನೋಟಿಸ್ ನೀಡಿದ್ದರು. ಅದರಂತೆ ಡಿಡಿಪಿಐ, ಮಂಜುನಾಥ್ ಅವರ ವಿವರಣೆ ಕೇಳಿದ್ದರು. ಅದಕ್ಕೆ ಪಡೆದ ಪ್ರತಿಕ್ರಿಯೆ ಜತೆಗೆ ಡಿಡಿಪಿಐ, ಸಹಾಯಕ ಚುನಾವಣಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಮಂಜುನಾಥ್ ವಿವರಣೆ ಹಾಗೂ ಡಿಸಿಪಿಐ ವರದಿ ಆಧರಿಸಿ ಇಲಾಖಾ ತನಿಖೆ ಕಾಯ್ದಿರಿಸಿ ಬಿ.ಎಚ್.ಮಂಜುನಾಥ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.