ಎಲೆಕ್ಷನ್ ದಿನ ಪ್ರವಾಸ ಪ್ಲಾನ್ ಮಾಡ್ತಿದೀರಾ? ಎಚ್ಚರಿಕೆ; ರಸ್ತೆಯಲ್ಲೇ ಮಲಗಬೇಕಾಗುತ್ತೆ!

ಏ.24 ರ ಸಂಜೆ 6 ಗಂಟೆಯಿಂದ 26ರ ಮಧ್ಯರಾತ್ರಿ 12ಗಂಟೆಯವರೆಗೆ ಹೋಟೆಲ್, ಲಾಡ್ಜ್, ರೆಸಾರ್ಟ್ ಗಳಲ್ಲಿ ವಾಸ್ತವ್ಯ ನಿಷೇಧ

ಹಾಸನ: ಮತದಾನಕ್ಕೆ ಚಕ್ಕರ್ ಹಾಕಿ ಪ್ರವಾಸಿ ತಾಣಗಳಿಗೆ ದಾಂಗುಡಿಯಿಡುವ ನಗರವಾಸಿಗಳಿಗೆ ಕಡಿವಾಣ ಹಾಕಿ, ಅವರು ಚುನಾವಣೆಯಂದು ಮತದಾನ ಮಾಡಲೆಂಬ ಸದುದ್ದೇಶದಿಂದ ಏ. 24 ರಿಂದ 26ರವರೆಗೆ ಜಿಲ್ಲೆಯ ಎಲ್ಲ ರೆಸಾರ್ಟ್, ಲಾಡ್ಜ್ ಹಾಗೂ‌ ಹೋಂಸ್ಟೇಗಳು ವಸತಿ ಸೌಲಭ್ಯ ನಿಷೇಧಿಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಬುಧವಾರ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶ

ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನ ಏ.26 ರಂದು ನಡೆಯಲಿದೆ. ಆ ಸಮಯದಲ್ಲಿ ಹಾಸನ ಜಿಲ್ಲೆಯಾದ್ಯಂತ ಇರುವ ಎಲ್ಲ ರೆಸಾರ್ಟ್ಸ್, ವಸತಿಯುತ ಹೋಟೆಲ್ಸ್ ಮತ್ತು ಹೋಂಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಸಹಜವಾಗಿಯೇ ಮತದಾನದಿಂದ ವಂಚಿತರಾಗಿ ಮತದಾನವನ್ನು ಮಾಡದೇ ಇರುವ ಸಂಭವ ಇದೆ.

ನಮ್ಮ ಪ್ರಜಾಪ್ರಭುತ್ವದ ಆಶಯವಾದ ಮತದಾನದ ಹಕ್ಕನ್ನು ಹಾಗೂ ಕರ್ತವ್ಯವನ್ನು ಪಾಲಿಸುವ ಸದುದ್ದೇಶದಿಂದ ಏ.24 ರ ಸಂಜೆ 6 ಗಂಟೆಯಿಂದ 26ರ ಮಧ್ಯರಾತ್ರಿ 12ಗಂಟೆಯವರೆಗೆ ಹಾಸನ ಜಿಲ್ಲೆಯಲ್ಲಿರುವ ಎಲ್ಲಾ ರೆಸಾರ್ಟ್ಸ್, ವಸತಿಯುತ ಹೋಟೆಲ್ಸ್ ಮತ್ತು ಹೋಂಸ್ಟೇಗಳಲ್ಲಿ ವಾಸ್ತವ್ಯ ಕಲ್ಪಿಸುವುದನ್ನು ನಿಷೇಧಿಸುವುದು ಸೂಕ್ತವೆಂದು ಮನವರಿಕೆಯಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.