ಪಾಪ ರೇವಣ್ಣ ಯಾವಾಗಲೂ ದೇವಸ್ಥಾನ, ದೇವಸ್ಥಾನ ಅಂತ ಹೋಗ್ತಾರೆ, ಆದರೆ ಮಸೂದೆ ವಿರೋಧಿಸ್ತಾರೆ: ಡಿಕೆಶಿ ಲೇವಡಿ

ಹಾಸನ: ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಚಕರು ಯಾರು? ಅವರು ಒಂದು ಪಾರ್ಟಿಯವರಾ? ಬಿಜೆಪಿಯವರಿಗೆ ಸೇರಿದವರೇ? ಅವರಿಗೆ ಅನುಕೂಲ‌ ಮಾಡಲು, ಸಣ್ಣ ಸಣ್ಣ ದೇವಾಲಯಗಳನ್ನು ಅಭಿವೃದ್ಧಿ ಮಾಡಲು ಮಸೂದೆ ತಂದೆವು ಅದನ್ನೂ ವಿರೋಧಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಪಾಪ ರೇವಣ್ಣ ಯಾವಾಗಲೂ ದೇವಸ್ಥಾನ, ದೇವಸ್ಥಾನ ಅಂತ ಹೋಗ್ತಾರೆ, ಇದನ್ನು ರೇವಣ್ಣ ಅವರಿಗೆ ಹೇಳಬೇಕು ಎಂದರು.

ದೇವರು ವರನೂ ಕೊಡಲ್ಲ ಶಾಪನೂ ಕೊಡಲ್ಲ. ವರ್ಷಕ್ಕೆ ಒಂದು ಸಾರಿ ಬಾಗಿಲು ತೆರೆದಾಗ ಹಾಸನಾಂಬೆಗೆ ನಮಸ್ಕಾರ ಮಾಡಿ ಹೋಗ್ತಿನಿ ಎಂದರು.

ನನಗೆ ಹಾಸನ ಜಿಲ್ಲೆಯ ಜನತೆ ಬಗ್ಗೆ ಬಹಳ ವಿಶ್ವಾಸ ಇದೆ. ಹಾಗಾಗಿ ಹಿಮಾಚಲ ಪ್ರದೇಶದಿಂದ ರಾತ್ರೋ ರಾತ್ರಿ ಪ್ರಯಾಣ ಮಾಡಿ ನಿಮ್ಮನ್ನೆಲ್ಲಾ ಭೇಟಿ ಮಾಡಲು ಹಾಸನಕ್ಕೆ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಶಕ್ತಿ ಕೊಡ್ತಿರಾ ಅನ್ಕೊಂಡಿದ್ದೆ. ಕೊಟ್ಟಿದ್ದಾರೆ ಕೆಲವರೆಲ್ಲ ಹತ್ತಿರ ಹತ್ತಿರಕ್ಕೆ ಬಂದು ಸೋತರು, ಆ ರೀತಿ ಶಕ್ತಿ ಕೊಟ್ಟಿದ್ದೀರಿ. ನೀವು ಕೊಟ್ಟ ಮತ ಐದು ಗ್ಯಾರೆಂಟಿಗಳನ್ನು ತರಲು ಶಕ್ತಿ ಆಯ್ತು ಎಂದರು.