ಹಾಸನ, ಮೇ 29, 2025: ಬೇಲೂರು ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಕೆಲಸದಲ್ಲಿ ತೊಡಗುವ ಕಾರ್ಮಿಕರು ಕಾಡಾನೆ ದಾಳಿಗೆ ಬಲಿಯಾದ ಪ್ರಕರಣಗಳು ವರದಿಯಾದ್ದರಿಂದ ಕಾರ್ಮಿಕರ ಕೆಲಸದ ಅವಧಿಯನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಿತಿಗೊಳಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ.

ಅರೇಹಳ್ಳಿ, ಬಿಕ್ಕೋಡು ಮತ್ತು ಕಸಬಾ ಹೋಬಳಿಗಳ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈ ನಿಯಮ ಅನ್ವಯವಾಗಲಿದೆ.
ಕಳೆದ ಐದು ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಆರು ಮಂದಿ ಸಾವನ್ನಪ್ಪಿದ್ದು, ಬೇಲೂರು ತಾಲೂಕಿನಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಬಿಕ್ಕೋಡು, ಅರೇಹಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಈ ಘಟನೆಗಳು ಸಂಭವಿಸಿವೆ.
ಈ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬೆಳಿಗ್ಗೆ 8 ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯ ನಂತರ ಆನೆಗಳ ಸಂಚಾರ ಹೆಚ್ಚಾಗಿದೆ. ಹೀಗಾಗಿ ಆನೆ ಓಡಾಟದ ಸಮಯದಲ್ಲಿ ಜನರು ದಾಳಿಗೆ ಬಲಿಯಾಗುವುದನ್ನು ತಪ್ಪಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಜನರ ಸುರಕ್ಷತೆಗಾಗಿ ಜಿಲ್ಲಾಧಿಕಾರಿಯ ಈ ಹೊಸ ಮಾರ್ಗಸೂಚಿ ತಕ್ಷಣದಿಂದ ಜಾರಿಗೆ ಬಂದಿದೆ.
