ಸಂಪೂರ್ಣ ಸಾಕ್ಷರತೆ ಸಾಧಿಸಲು ಎಲ್ಲರೂ ಕೈಜೋಡಿಸಿ; ಡಿಸಿ ಸಿ.ಸತ್ಯಭಾಮ ಕರೆ

ಹಾಸನ: ಹಾಸನವನ್ನು ಶೇ.100  ಸಾಕ್ಷರ ಜಿಲ್ಲೆಯಾಗಿಸಲು ಸರ್ಕಾರದ ಸಾಕ್ಷರತಾ ಕಾರ್ಯಕ್ರಮದೊಂದಿಗೆ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಕೈ ಜೋಡಿಸಬೇಕು ಎಂದು‌ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕರೆ ನೀಡಿದರು.

ನಗರದ  ವಾರ್ತಾ ಭವನದ ಆವರಣದಲ್ಲಿ ಲೋಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಸಾಕ್ಷರತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ  ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಹಾಗೂ ಸಾಕ್ಷರತಾ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಇನ್ನೂ ಅನಕ್ಷರಸ್ಥರಾಗಿರುವವರನ್ನು ಗುರುತಿಸಲಾಗುವುದು. ಸಮೀಕ್ಷೆ ಬಗ್ಗೆ ತಯಾರಿಗೆ ಸಭೆಗಳು ನಡೆಯುತ್ತಿವೆ. ನಮ್ಮ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ.79 ರಿಂದ 80 ಎಂದು ಅಂದಾಜು ಮಾಡಲಾಗಿದೆ. ರಾಜ್ಯದ ಪ್ರಮಾಣವೂ ಶೇ. 80ರಷ್ಟಿದೆ.

ಜಿಲ್ಲೆಯ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಎಲ್ಲರೂ ಕಟಿಬದ್ಧರಾಗಬೇಕು. ಅನಕ್ಷರಸ್ಥರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ರಾಜ್ಯದಲ್ಲಿ ಒಟ್ಟಾರೆ ಶೇ. 77.72  ಸಾಕ್ಷರರಿದ್ದಾರೆ. 1978-79 ರಲ್ಲಿ ಒಂದು ಸಾಕ್ಷರತಾ ಆಂದೋಲನ ಪ್ರಾರಂಭವಾಗಿದ್ದು, ಈ ವರ್ಷ ಜಿಲ್ಲೆಯಲ್ಲಿ ನಾವು 30 ಸಾವಿರ ಜನರನ್ನು ನವಸಾಕ್ಷರರಾಗಿ ಮಾಡಿದ್ದೇವೆ.

ಗ್ರಾಮ ಪಂಚಾಯಿತಿಗಳ 223 ಸದಸ್ಯರು ಸಾಕ್ಷರತಾ ಯೋಜನೆಯಡಿ ಅಕ್ಷರ ಕಲಿತಿದ್ದಾರೆ.  ನಮ್ಮ ಜಿಲ್ಲೆಯಲ್ಲಿ ಒಟ್ಟು 30 ಸಾವಿರ ಜನರಿಗೆ ಅಕ್ಷರ ಜ್ಞಾನವನ್ನು ನೀಡಿದ್ದೇವೆ. ಇದು ಪ್ರತಿ ವರ್ಷ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕಿ ಮೀನಾಕ್ಷಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಎಸ್.ಎಸ್. ಪಾಷಾ, ಶಬ್ಬೀರ್ ಅಹಮದ್, ಬಿ.ಟಿ. ಮಾನವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಸಾಕ್ಷರತಾ ಗೀತೆಗಳನ್ನು ಹಾಡಿದರು.