ಹಾಸನ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಡಿ.ಟಿ.ಪ್ರಸನ್ನ ಆಯ್ಕೆ

ಉಪಾಧ್ಯಕ್ಷರಾಗಿ ಎಚ್.ಎನ್. ಯೋಗೇಶ್| ಕಾರ್ಯದರ್ಶಿಯಾಗಿ ಬಿ.ಎಂ.ಸಂತೋಷ್ ಆಯ್ಕೆ

ಹಾಸನ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಅಧ್ಯಕ್ಷರಾಗಿ ಡಿ.ಟಿ.ಪ್ರಸನ್ನ ಆಯ್ಕೆಯಾದರು.

ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾರ್ಲೆ ಮೊಗಣ್ಣ ಗೌಡ ಹಾಗೂ ಡಿ.ಟಿ.ಪ್ರಸನ್ನ ಸ್ಪರ್ಧಿಸಿದ್ದರು. ಮೊಗ್ಗಣ್ಣ ಗೌಡ 323 ಮತಗಳನ್ನು ಪಡೆದರೆ, ಪ್ರಸನ್ನ 434 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಉಪಾಧ್ಯಕ್ಷರಾಗಿ ಎಚ್.ಎನ್.ಯೋಗೇಶ್ 280 ಮತಗಳನ್ನು ಪಡೆದು ಆಯ್ಕೆಯಾದರು. ಇದೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಆರ್.ಶಿವರಾಮಚಂದ್ರ ಕೇವಲ 10, ಜಿ.ಎನ್.ಸುಗುಣ 74, ಎಂ.ಟಿ.ತಿಮ್ಮೇಗೌಡ 265, ಎಸ್.ಯತೀಶ್ 106 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎಂ.ಸತೋಷ್ 376 ಮತಗಳನ್ನು ಪಡೆದು ಜಯಗಳಿಸಿದರೆ, ಎಚ್.ಆರ್.ಓಂಬೇಶ್ 307 ಹಾಗೂ ಎಸ್.ಬಿ.ಮಂಜುನಾಥ್ 66 ಮತಗಳನ್ನು ಪಡೆದು ಪರಾಭವಗೊಂಡರು. ಇನ್ನು ಜಿಲ್ಲಾ ವಕೀಲರ ಸಂಘದ ಖಜಾಂಚಿಯಾಗಿ ಎಚ್.ಎನ್. ಪ್ರತಾಪ್ 496 ಮತಗಳಿಂದ ಆಯ್ಕೆಯಾಗಿದ್ದು, ಎ.ಜೆ.ರಘು 255 ಮತಗಳಿಂದ ಪರಾಭವಗೊಂಡಿದ್ದಾರೆ.