ಕೋಮು‌ದ್ವೇಷ ಹೊತ್ತು ಅಶಾಂತಿ ಮೂಡಿಸುವುದು ಅಕ್ಷಮ್ಯ, ರಾಜ್ಯ ಸರ್ಕಾರ ಓಲೈಕೆ‌ ರಾಜಕಾರಣ ನಿಲ್ಲಿಸಬೇಕು: ಪ್ರೀತಂಗೌಡ

ಹಾಸನ: ಮಂಗಳೂರಲ್ಲಿ ಅಥವಾ ಬೇರೆ ಎಲ್ಲೇ ಆಗಲೀ ಕೋಮುದ್ವೇಷ ಬಿತ್ತಿ ಅಶಾಂತಿ ನಿರ್ಮಾಣ ಮಾಡುವುದು ಅಕ್ಷಮ್ಯ ಅಪರಾಧ, ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಆಡಳಿತದಿಂದ ಯಾರೇ ಬಲಿಯಾದರೂ ಅಮೂಲ್ಯ ಜೀವಕ್ಕೆ ಬೆಲೆ ಕಟ್ಟಲು ಆಗಲ್ಲ ಎಂದರು.

ಹೀಗಾಗಿ ಆಡಳಿತ ನಡೆಸುವ ಸರ್ಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕು ಎಂದರೆ ಎಲ್ಲರೂ ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.

ಕರಾವಳಿ ಭಾಗದಲ್ಲಿ ಕೋಮುದ್ವೇಷ ಹೆಚ್ಚಾಗಲು ಬಿಜೆಪಿ ಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಆರೋಪಕ್ಕೆ, ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಕುಟುಕಿದರು. ಕಾನೂನನ್ನು ಬಿಗಿ ಪಡಿಸಿ ಯಾರು ತಪ್ಪು ಮಾಡುತ್ತಾರೋ ಅವರನ್ನು ಕಠಿಣವಾಗಿ ದಂಡಿಸಬೇಕು. ಓಲೈಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು.

ಎಲ್ಲ ಧರ್ಮದವರ ಪ್ರಾಣಕ್ಕೂ ಬೆಲೆ ಇದೆ ಎಂಬುದನ್ನು ಮನಗಾಣಬೇಕು ಎಂದರು. ಕಾನೂನು ಮೀರಿದರೆ ಹೀಗೆ: ಹುಬ್ಬಳ್ಳಿ ಗಲಭೆ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿದ್ದನ್ನು ರದ್ದು ಮಾಡಿರುವ ಹೈಕೋರ್ಟ್ ಆದೇಶ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ನಡೆಸುವವರು ನಾವೇ ಸಾರ್ವಭೌಮರು ಅಂದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನಲ್ಲಿ ಅವಕಾಶ ಇಲ್ಲದೇ ಇರುವುದನ್ನು ಮಾಡಿದರೆ ಏನಾಗಲಿದೆ ಎಂಬುದಕ್ಕೆ ಹೈ ತೀರ್ಪು ಉದಾಹರಣೆ ಎಂದರು.

ಈ ರೀತಿಯ ತೀರ್ಮಾನ ಕೈಗೊಳ್ಳುವ ಮುನ್ನ ೧೦ ಬಾರಿ ಯೋಚಿಸಬೇಕು ಎಂದರು. ಸರ್ಕಾರದ ಇದೇ ರೀತಿಯ ಯಡವಟ್ಟುಗಳಿಂದ ಮಂಗಳೂರಿನಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆ ಆಗುತ್ತಿದೆ ಎಂದು ಉದಾಹರಿಸಿದರು. ಕೋಮುದಳ್ಳುರಿ ಬಿತ್ತುವ, ಅಶಾಂತಿ ಸೃಷ್ಟಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲಿನ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ ಎಂದರು.

ಹಿಂದೆಯೇ ಆಗಬೇಕಿತ್ತು: ಬಿಜೆಪಿಯಿಂದ ಮಾಜಿ ಸಚಿವರು, ಹಾಲಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಹಿಂದೆಯೇ ಆಗಬೇಕಿತ್ತು. ಇದು ಕಾರ್ಯಕರ್ತರ ಆಶಯವೂ ಆಗಿತ್ತು. ಅವರ ನಡವಳಿಕೆ ಅದನ್ನು ತೋರಿಸಿಕೊಡುತ್ತಿತ್ತು. ಅಂತಿಮವಾಗಿ ಪಕ್ಷ ತೀರ್ಮಾನ ಕೈಗೊಂಡಿದೆ. ಯಾರೇ ಆಗಲಿ, ಪಕ್ಷದ ವಿರೋಧಿ ಚಟುವಟಿಕೆ ನಡೆಸಿದರೆ ಇದೇ ಶಿಕ್ಷೆಯಾಗುತ್ತದೆ ಎಂಬುದನ್ನು ಕೇಂದ್ರ ನಾಯಕರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ಮುಂದಿನ ಜಿಪಂ-ತಾಪಂ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಮುಂದುವರಿಕೆ ಕುರಿತ ಪ್ರಶ್ನೆಗೆ ಇದನ್ನು ರಾಜ್ಯಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಉತ್ತರಿಸಿದರು.