ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ 20 ರೂ!: ಜೇಬು ಸುಡುತ್ತಿರುವ ಸೊಪ್ಪು, ತರಕಾರಿ ದರ

ಮುಂಗಾರುಪೂರ್ವ ಮಳೆಗೆ ಕೊಳೆಯುತ್ತಿರುವ ಬೆಳೆ| ಆವಕ ಕುಸಿತ

ಹಾಸನ: ಎರಡು ರೂಪಾಯಿಗೆ ಒಂದು ಕಂತೆ (ಕಟ್ಟು) ಎಂದರೂ ಚೌಕಾಸಿಯಲ್ಲಿ ವ್ಯಾಪಾರವಾಗುತ್ತಿದ್ದ ಕೊತ್ತಂಬರಿ ಸೊಪ್ಪಿನ ಬೆಲೆ ಈಗ 20 ರೂ.!

ಹೌದು, ಮುಂಗಾರು ಪೂರ್ವ ಮಳೆಯ ಆರ್ಭಟದಿಂದ ಬರದ ತಾಪವೇನೋ ಕಳೆಯುತ್ತಿದೆ. ಆದರೆ ವರುಣಾಘಾತದಿಂದ ಸೊಪ್ಪು, ತರಕಾರಿ ಬೆಳೆಗಳು ನೆಲಕಚ್ಚಿದ್ದು ಬೆಲೆ ಸಸ್ಯಾಹಾರಿಗಳ ಜೇಬು ಸುಡುತ್ತಿದೆ.

ತರಕಾರಿ ಬೆಳೆಯುವುದರಲ್ಲಿ ಮುಂಚೂಣೆಯಲ್ಲಿರುವ ಹಾಸನ ಜಿಲ್ಲೆಯಲ್ಲಿಯೇ ತರಕಾರಿಗಳ ಬೆಲೆ ಗಗನಕ್ಕೇರಿದೆ. ನಗರದ ಎ.ಪಿ.ಎಂ.ಸಿ ಹಾಗು ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ತರಕಾರಿಗಳ ದರ ದಿಢೀರ್ ಏರಿಕೆ ಕಂಡಿದ್ದು,ಬೀನ್ಸ್‌ ಬೆಲೆ ಕೇಳಿದರೆ ಸಾಕು ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ.ಇದರಿಂದಾಗಿ ಗ್ರಾಹಕರು ತರಕಾರಿಗಳನ್ನು ತಿನ್ನಬೇಕೋ? ಬೇಡವೋ? ಎಂದು ಚಿಂತಿಸುವ ಸ್ಥಿತಿಗೆ ತಲುಪುವಂತಾಗಿದೆ.

ಇಳುವರಿ ಕಡಿಮೆಯಾಗಿರುವ ಕಾರಣ ಮಾರುಕಟ್ಟೆಗೆ ಆವಕವಾಗುವ ತರಕಾರಿ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡಿದೆ ಅನ್ನೋದು ವ್ಯಾಪಾರಿಗಳ ವಾದ. ಜತೆಯಲ್ಲೇ ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿಗಳು ಕೊಳೆತು ಅಪಾರ ಹಾನಿ ಕೂಡಾ ಸಂಭವಿಸಿದೆ. ಇವೆಲ್ಲದರ ಪರಿಣಾಮವಾಗಿ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಇನ್ನು ತರಕಾರಿ ಮಾರಾಟಗಾರರ ಅತಿ ದೊಡ್ಡ ಸಮಸ್ಯೆ ತಾಜಾತನ ಕಾಯ್ದುಕೊಳ್ಳೋದು. ತರಕಾರಿಗಳು ಫ್ರೆಷ್ ಇಲ್ಲವಾದ್ರೆ ಖರೀದಿ ಮಾಡಲು ಗ್ರಾಹಕರು ಮುಂದೆ ಬರೋದೇ ಇಲ್ಲ. ಇನ್ನ ಥಂಡಿ ಹಾಗೂ ಮಳೆ ನೀರಿನಿಂದಾಗಿ ತರಕಾರಿಗಳು ಅತಿ ವೇಗವಾಗಿ ಕೊಳೆತು ಹೋಗುತ್ತಿವೆ. ಹೀಗಾಗಿಯೇ ಕೊತ್ತಂಬರಿ ಸೊಪ್ಪಿನ ಬೆಲೆ ಒಂದು ಕಟ್ಟಿಗೆ 20 ರೂ. ಗಿಂತಲೂ ಹೆಚ್ಚಾಗಿದೆ. ಎಲ್ಲ ತರಕಾರಿಗಳಿಗಿಂತಲೂ ಕೈಗೆಟುಕದಷ್ಟು ಮೇಲೆ ಏರಿರೋದು ಬೀನ್ಸ್‌.

ಮಾರುಕಟ್ಟೆಯಲ್ಲಿ ಸಿಗುವ ವೋಲ್‌ ಸೇಲ್ ತರಕಾರಿ ದರಕ್ಕೂ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ಹಾಗೂ ತಳ್ಳುವ ಗಾಡಿಗಳಲ್ಲಿ ಸಿಗುವ ರೀಟೇಲ್ ದರಕ್ಕೂ ಭಾರೀ ವ್ಯತ್ಯಾಸ ಕಾಣಬಹುದಾಗಿದೆ. ಹೀಗಾಗಿ, ತರಕಾರಿ ಬೆಳೆದು ಮಾರುಕಟ್ಟೆಗೆ ತರುವ ರೈತರಿಗೆ ಸಿಗುವ ಆದಾಯ ಬಹಳ ಕಡಿಮೆ. ಆದರೆ, ಅಂತಿಮವಾಗಿ ರೀಟೇಲ್‌ ಮಳಿಗೆಗಳಲ್ಲಿ ಮಾರಾಟವಾಗುವ ತರಕಾರಿ ದರಕ್ಕೂ ಕೃಷಿಕರಿಗೆ ಸಿಗುವ ಹಣಕ್ಕೂ ಅಜಗಜಾಂತರ ವ್ಯತ್ಯಾಸ ಕಾಣಬಹುದಾಗಿದೆ. ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಸೊಪ್ಪುಗಳ ಬೆಲೆ 4 ಬಂಡಲ್‌ಗೆ 40 ರೂಪಾಯಿ ಇದ್ದರೆ, ಸಗಟು ಮಾರುಕಟ್ಟೆಯಲ್ಲಿ ಪ್ರತಿ ಬಂಡಲ್‌ಗೆ 30 ರೂ. ಆಗಿಬಿಟ್ಟಿರುತ್ತೆ ಎನ್ನುತ್ತಾರೆ ಗ್ರಾಹಕರು.