ಬಿಜೆಪಿ ಸಂಸದರನ್ನು ನಪುಂಸಕರು ಎಂದು ಜರಿದ ಸಹಕಾರ ಸಚಿವ ರಾಜಣ್ಣ

ಹಾಸನ: ಸದಾ ತಮ್ಮ ಮಾತುಗಳಿಂದ ವಿವಾದ ಸೃಷ್ಟಿಸಿಕೊಳ್ಳುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಈಗ ಬಿಜೆಪಿ ಸಂಸದರನ್ನು ನಪುಂಸಕರು ಎಂದು ಜರಿದಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಬೆಂಬಲಿಸುವ ಕುರಿತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡುವಾಗ ಮತ್ತೊಮ್ಮೆ ನಾಲಿಗೆ ಹರಿಬಿಟ್ಟರು.

ಹತ್ತು ವರ್ಷಗಳು ನರೇಂದ್ರಮೋದಿಯವರು ಬರೀ ಸುಳ್ಳು ಹೇಳಿದರೆ ಹೊರತು ಬೇರೆ ಏನೂ ಮಾಡಲಿಲ್ಲ. ಎರಡು ಕೋಟಿ ಉದ್ಯೋಗ ನೀಡಲಿಲ್ಲ, ಹದಿನೈದು ಲಕ್ಷ ಹಣ ಕೊಡಲಿಲ್ಲ. ನಾವೆಲ್ಲ ಸಚಿವರು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದೆವು ಎಂದರು.

ನಮ್ಮ ರಾಜ್ಯದಿಂದ ನೂರು ರೂಪಾಯಿ ಹೋದರೆ ನಮಗೆ ಬರುವುದು ಹದಿಮೂರು ಪೈಸೆ ಮಾತ್ರ. ನಾಲ್ಕು ಲಕ್ಷ ಕೋಟಿ ಹೆಚ್ಚು ಹಣ ಕೇಂದ್ರಕ್ಕೆ ತೆರಿಗೆ ನೀಡುತ್ತೇವೆ. ನಮ್ಮ ತೆರಿಗೆ ನಮ್ಮ‌ ಹಕ್ಕು ಅಭಿಯಾನವನ್ನು ದೆಹಲಿಯಲ್ಲಿ ಮಾಡಿದೆವು.ಬರಗಾಲವಿದೆ, ಕುಡಿಯುವ ನೀರಿಗೆ ಹಾಹಾಕಾರವಿದೆ, ಜಾನುವಾರುಗಳಿಗೆ ಮೇವು ಇಲ್ಲ, ಆದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ನಮ್ಮ ರಾಜ್ಯದಿಂದ ಹೋಗಿರುವ ಸಂಸದರು ಒಬ್ಬರಾದರೂ ಪಾರ್ಲಿಮೆಂಟ್ ಒಳಗೆ ಆಗಲಿ, ಹೊರಗಡೆ ಆಗಲೀ ನಮ್ಮ ರಾಜ್ಯಕ್ಕೆ ನಿಯಮಾನುಸಾರ ಏನೆಲ್ಲಾ ಅನುಕೂಲ ನೀಡಬೇಕು ಅದನ್ನು ಕೊಡಿ ಎಂದು ಕೇಳಿಲ್ಲ.
ಅಂತಹ ನಪುಂಸಕ ಲೋಕಸಭಾ ಸದಸ್ಯರನ್ನು ನಮ್ಮ ರಾಜ್ಯದಿಂದ ಕಳಿಸಿದ್ದೇವೆ ಎಂದರು.

ಇದು ನಮಗೆಲ್ಲಾ ಅವಮಾನ ಆಗುತ್ತದೆ. ನಮ್ಮ ರಾಜ್ಯದ ಯಾವುದೇ ಸಮಸ್ಯೆ ಲೋಕಸಭೆಯಲ್ಲಿ ಚರ್ಚೆ ಆಗಲ್ಲ ಎಂದರು.