ಮರಗಳ್ಳರಿಗೆ ಪ್ರತಾಪ್ ಸಿಂಹನ ಬೆಂಬಲ ಅಂತ ನಾವೂ ಹೇಳಬಹುದಲ್ಲಾ? ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ

ಹಾಸನ : ನಂದಗೊಂಡನಹಳ್ಳಿ ಗ್ರಾಮದಲ್ಲಿ ಮರಕಡಿತ ಹಾಗೂ ಸಂಸದ ಪ್ರತಾಪ್‌ಸಿಂಹ ಸಹೋದರ ವಿಕ್ರಂಸಿಂಹ ಬಂಧನ, ಬಿಡುಗಡೆ ವಿಚಾರದಲ್ಲಿ ಸಂಸದ ಪ್ರತಾಪ್‌ಸಿಂಹ ವಿರುದ್ಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಮಾತನಾಡಿದ ಅವರು, ಕಾನೂನಿನಂತೆ ಕ್ರಮ ಆಗಿದೆ. ಇದಕ್ಕೆ ಯಾವೆಲ್ಲಾ ಅಧಿಕಾರಿಗಳು ಸಹಕರಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾನೂನಿಗೆ ವಿರುದ್ಧವಾಗಿ ಯಾವೆಲ್ಲ ಅಧಿಕಾರಿಗಳು ಕಾಡುಗಳ್ಳರಿಗೆ ಪ್ರೋತ್ಸಾಹ ಕೊಟ್ಟಿದ್ದಾರೋ ಅವರ ಮೇಲೆ ಈಗಾಗಲೇ ಕ್ರಮ ಆಗಿದೆ.

ಕಾಂಗ್ರೆಸ್‌ನವರು ಮರ ತಗೊಂಡೋಗಿ ಅಲ್ಲಿ ಇಟ್ಟು ಅವರ ಅಣ್ಣನನ್ನೋ, ತಮ್ಮನ್ನೋ ಆ ಕೇಸ್‌ನಲ್ಲಿ ಸಿಲುಕಿಸಿದ್ದಾರಾ? ಎಂದು ಪ್ರಶ್ನಿಸಿದರು.

ಅವರೇ ಕತ್ತರಿಸಿದ್ದಾರೆ. ಅಲ್ಲೇ ಸಿಕ್ಕಿದ್ದಾರೆ. ಇದು ರಾಜಕೀಯಪ್ರೇರಿತ ಅಂದರೆ ನೀವು ಒಪ್ತಿರಾ ಹೇಳಿ, ಯಾರೇ ತಪ್ಪ ಮಾಡಲಿ, ಕಾಂಗ್ರೆಸ್‌ನವರೇ ಮಾಡಿರಲಿ, ಇನ್ನೊಂದು ಪಕ್ಷದವರು ಮಾಡಿರಲಿ, ಇನ್ನೊಂದು ಊರಿನವರು ಮಾಡಿರಲಿ ಕಾನೂನು ಎಲ್ಲರಿಗೂ ಒಂದೇ. ಯಾರು ತಪ್ಪಿತಸ್ಥರಿರುತ್ತಾರೋ ಅವರಿಗೆ ಕಾನೂನಿನಡಿ ಶಿಕ್ಷೆ ಆಗುತ್ತೆ ಎಂದರು.

ಇವರ ತಮ್ಮ ಕಳ್ಳ ಅಂತ ಜನರ ಮನಸ್ಸಿನಲ್ಲಿ, ಆರೋಪ ಸಾಬೀತಾದ ರೀತಿಯಲ್ಲಿದೆ. ಅಂತಹವರಿಗೆ ಇವರು ಬೆಂಬಲ ಕೊಡ್ತಾರೆ ಅಂತ ಭಾವಿಸಬಹುದಾ?

ಮರಗಳ್ಳರಿಗೆ ಪ್ರತಾಪ್‌ಸಿಂಹನ ಬೆಂಬಲ ಅಂತ ನಾವು ಹೇಳಬಹುದಲ್ಲಾ? ಯಾವ್ಯಾವುದೋ ಕಾರಣಕ್ಕೋಸ್ಕರ ಯಾರ‌್ಯಾರನ್ನೋ ಟೀಕೆ ಮಾಡುವುದು ಸರಿಯಾದ ಪದ್ಧತಿ ಅಲ್ಲ ಎಂದು ಹರಿಹಾಯ್ದರು.

ಈಗಾಗಲೇ ಕಾನೂನು ಕ್ರಮಗಳು ಜಾರಿಯಲ್ಲಿವೆ. ಕೋರ್ಟ್‌ನಲ್ಲಿ ನಿರ್ದೋಷಿ ಅಂತ ಹೊರಬರಲಿ ಯಾರು ಬೇಡ ಅಂತಾರೆ ಎಂದು ಪ್ರಶ್ನಿಸಿದರು.