ಹಾಸನ: ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿನ ಸಂಸದರ ಕಚೇರಿಯನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಉದ್ಘಾಟಿಸಿದರು.
ನೂತನ ಕಚೇರಿಯಲ್ಲಿ ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ಮಾಡಲಾಯಿತು. ಕಚೇರಿ ಉದ್ಘಾಟನೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್ ದಂಪತಿ, ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡರು.
ಕೆ.ಎನ್.ರಾಜಣ್ಣ ಮಾತನಾಡಿ, 25 ವರ್ಷಗಳ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಜಿಲ್ಲೆಯ ಜನ ಆಶೀರ್ವಾದ ಮಾಡಿ ಶ್ರೇಯಸ್ ಪಟೇಲ್ ಅವರನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಜನರಿಗೆ ಸುಲಭವಾಗಿ ಸಿಗುವ ನಿಟ್ಟಿನಲ್ಲಿ ಕಚೇರಿಯನ್ನು ಬಳಸಿಕೊಂಡು ಆಗಾಗ ಕಚೇರಿಗೆ ಆಗಮಿಸುವ ಮೂಲಕ ಜನರ ಅಹವಾಲು ಸ್ವೀಕರಿಸಿ ಬಗೆ ಹರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದರು.
ಪ್ರತಿಯೊಬ್ಬ ಜನಪ್ರತಿನಿಧಿಯೂ ತಮ್ಮ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸಗಳ ಮೇಲೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಅದೇ ರೀತಿ ಶ್ರೇಯಸ್ ಪಟೇಲ್ ಕೂಡ ತನ್ನ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗುವುದೂ ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಶ್ರೇಯಸ್ ಪಟೇಲ್ ಸಂಸದನಾಗಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಜನರ ಆಶೀರ್ವಾದ ಪಡೆದು ಇನ್ನು ಮುಂದಿನ 25 ವರ್ಷಗಳು ಅವರೇ ಸಂಸದನಾಗಿ ಮುಂದುವರಿಯುವಂತೆ ಆಗಲಿ ಎಂದು ಹಾರೈಸಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಇಂದು ಸಚಿವ ಕೆ.ಎನ್ ರಾಜಣ್ಣ ಅವರ ಅಮೃತ ಹಸ್ತ ನಮ್ಮ ಕಚೇರಿ ಉದ್ಘಾಟನೆ ಮಾಡಲಾಗಿದೆ. ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನನ್ನ ಅಧಿಕಾರಾವಧಿಯುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುವೆ. ವಾರದಲ್ಲಿ ನಿಗದಿತ ಎರಡು ದಿನ ಕಚೇರಿಯಲ್ಲಿ ಇದ್ದು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಾಗುವುದು ಎಂದರು.
ಜಿಲ್ಲೆಯ ಜನರು ನನಗೆ ಒಂದು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ, ಜಿಲ್ಲೆಯ ಜನರ ಹಾಗೂ ಮುಖಂಡರ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜತೆಗೆ ನನ್ನ ಕಚೇರಿಗೆ ಸಿಬ್ಬಂದಿ ನೇಮಕ ಮಾಡಿ ಜನರ ಅಹವಾಲುಗಳನ್ನು ಪಡೆದು ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ ಎಂದರು.