ಹೊಳೆನರಸೀಪುರ ಮುನ್ಸಿಪಾಲಿಟಿ ಬೈ ಎಲೆಕ್ಷನ್; ರೇವಣ್ಣ ಕುಟುಂಬಕ್ಕೆ ಆಘಾತ, ಕಾಂಗ್ರೆಸ್ ಜಯಭೇರಿ

ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರ ಮನೆಮನೆ ಪ್ರಚಾರದ ಪರಿಶ್ರಮದ ನಂತರವೂ ಹೊಳೆನರಸೀಪುರ ಪುರಸಭೆ 11ನೇ ವಾರ್ಡ್ ಜೆಡಿಎಸ್ ಕೈತಪ್ಪಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.

ಜೆಡಿಎಸ್ ಭದ್ರಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಅವರನ್ನು ಮಣಿಸಿದ ಕಾಂಗ್ರೆಸ್ ಅಭ್ಯರ್ಥಿ ಭೈರಶೆಟ್ಟಿ ಗೆಲುವಿನ ನಗೆಬೀರಿದ್ದಾರೆ.

11ನೇ ವಾರ್ಡ್ ಸದಸ್ಯರಾಗಿದ್ದ ಸುಬ್ರಮಣ್ಯ ಅವರ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.

ಈ ಮೊದಲು ಪುರಸಭೆಯ ಎಲ್ಲ 23 ವಾರ್ಡ್ ಗಳನ್ನು ತನ್ನ ಖಾತೆಯಲ್ಲಿರಿಸಿಕೊಂಡಿದ್ದ ಜೆಡಿಎಸ್ ಈಗ ಒಂದು ಸ್ಥಾನ ಕಳೆದುಕೊಂಡಿದೆ.

ಒಟ್ಟು ಚಲಾವಣೆ ಆಗಿದ್ದ 545 ಮತಗಳಲ್ಲಿ, ಕಾಂಗ್ರೆಸ್ 235, ಜೆಡಿಎಸ್ ಗೆ 219, ಪಕ್ಷೇತರ ಅಭ್ಯರ್ಥಿ ಸುರೇಶ್‌ಗೆ 63 ಮತ ಪಡೆದುಕೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಪಟ್ಟಣ ವ್ಯಾಪ್ತಿಯಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಿತ್ತು. ಅದನ್ನು ಸರಿಪಡಿಸಿಕೊಳ್ಳಲು ಜೆಡಿಎಸ್ ವರಿಷ್ಠರ ಕುಟುಂಬದ ಸದಸ್ಯರೇ ಕೇವಲ ಒಂದು ವಾರ್ಡ್ ಉಳಿಸಿಕೊಳ್ಳಲು ಮನೆಮನೆಗೆ ತೆರಳಿ ತಮ್ಮ ಅಭ್ಯರ್ಥಿ ಪರ ಮತಯಾಚಿಸಿದ್ದರು.

ಆದರೂ ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಪಟ್ಟಣದಲ್ಲಿ ದೊರಕಿದ್ದ ಬೆಂಬಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ಜತೆಗೆ ರೇವಣ್ಣ ಕುಟುಂಬಕ್ಕೆ ಆಘಾತವನ್ನೂ ನೀಡಿದ್ದಾರೆ.

ಭವಾನಿ ರೇವಣ್ಣ ಕಾರು ಅಪಘಾತ ರಂಪಾಟ, ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಜಮೀನು ಬಲವಂತವಾಗಿ ಮಾರಾಟ ಮಾಡಿಸಿದ ಆರೋಪಗಳು ಪಕ್ಷಕ್ಕೆ ಮಾಡುತ್ತಿರುವ ಹಾನಿಗೆ ಈ ಫಲಿತಾಂಶ ಸಾಕ್ಷ್ಯ ಆಗಿದೆ ಎನ್ನಲಾಗುತ್ತಿದೆ.