ಹಾಸನ: ಕಾಂಗ್ರೆಸ್ ಪಕ್ಷದ ಪಂಚ ಗ್ಯಾರೆಂಟಿಗಳು ಪಂಕ್ಚರ್ ಆಗಿಬಿಟ್ಟಿವೆ. ಹೀಗಾಗಿ ಉಪಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲಿಯೂ ಆಡಳಿತ ಪಕ್ಷದ ಪರವಾದ ಜನಾಭಿಪ್ರಾಯ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಹಾಸನಾಂಬೆ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರಿಗೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಪಂಚ ಗ್ಯಾರೆಂಟಿಗಳು ತಲುಪುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಮಾಸಿಕ ಮೂರು ಸಾವಿರ ರೂ. ನಿರುದ್ಯೋಗ ಭತ್ಯೆ ಕೊಡುತ್ತೇವೆ ಎಂದು ಮೂರು ನಾಮ ಹಾಕಿದರು ಎಂದು ವ್ಯಂಗ್ಯವಾಡಿದರು.
ಗೃಹಲಕ್ಷ್ಮಿ ಯೋಜನೆ ಹಣ ಕ್ರಮಬದ್ದವಾಗಿಲ್ಲ ಕೈಸೇರುತ್ತಿಲ್ಲ. ಆ ನೆಪದಲ್ಲಿ ನನಗೆ ಇರುವ ಮಾಹಿತಿ ಪ್ರಕಾರ 20 ರಿಂದ 25 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಯೋಜನೆ ಮಾಡಿದ್ದಾರೆ. ಪ್ರತಿ ಮನೆಗೆ 200 ಯೂನಿಟ್‌ವರೆಗೂ ವಿದ್ಯುತ್ ಫ್ರೀ ಅಂದರು. ಈಗ 12 ಯೂನಿಟ್ ಬಳಕೆ ಮಾಡುತ್ತಿದ್ದವನು 20 ಯೂನಿಟ್ ಬಳಕೆ ಮಾಡಿದರೆ ಡಬಲ್ ಬಿಲ್ ಬರುತ್ತದೆ ಎಂದು ಕಿಡಿಕಾರಿದರು.
ಫ್ರೀ ಎಲ್ಲಿ? ಎಲ್ಲಿ ಫ್ರೀ ಇದೆ? ಶಕ್ತಿ ಯೋಜನೆ ಬಗ್ಗೆ ಉಪಮುಖ್ಯಮಂತ್ರಿಗಳೇ ನಿಶ್ಯಕ್ತವಾಗಿದೆ ಎಂದು ವಾದವನ್ನು ಮುಂದಿಟ್ಟಿದ್ದಾರೆ. ಶಕ್ತಿ ಯೋಜನೆ ನೆಪದಲ್ಲಿ ಇದ್ದ ರೂಟ್‌ಗಳನ್ನು ಕಡಿತಗೊಳಿಸಿದ್ದಾರೆ.
10 ಕೆಜಿ ಅಕ್ಕಿ ಕೊಡಲೂ ಇಲ್ಲ. ಬದಲಿ ಹಣವೂ ಬರುತ್ತಿಲ್ಲ. ಇದೆಲ್ಲ ಪಂಚ ಗ್ಯಾರೆಂಟಿಗಳು ಪಂಕ್ಚರ್ ಆಗಿರುವುದಕ್ಕೆ ನಿದರ್ಶನ. ಅವರದ್ದೇ ಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮಂತ್ರಿಗಳು ಅಸಹನೆ ತೋಡಿಕೊಂಡಿದ್ದಾರೆ. ಜನಾಭಿಪ್ರಾಯ ಅವರ ವಿರುದ್ಧವಾಗಿದೆ ಎಂದರು.
ವಿರುದ್ಧವಾಗಿರುವ ಜನಾಭಿಪ್ರಾಯ ಮತಗಳಾಗಿ ಪರಿವರ್ತನೆಗೊಂಡರೆ ಮೂರೂ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಸೋಲಬೇಕು. ಆದರೆ ಹಣ ಬಲ, ಅಧಿಕಾರ ಬಲ, ಕಾಂಗ್ರೆಸ್ ಪಾರ್ಟಿ ಜತೆ ಇದೆ. ಎನ್‌ಡಿಎ ಜತೆ ಜನಬಲ ಮಾತ್ರವಿದೆ.
ಎಷ್ಟೋ ಬಾರಿ ಉಪಚುನಾವಣೆ ನಡೆದಾಗ ಹಣ, ಅಧಿಕಾರ ಬಲ ಸೋತಿದೆ. ಇಲ್ಲೂ ಅಧಿಕಾರ, ಹಣದ ಬಲ ಸೋಲಬೇಕು. ಸೋಲುತ್ತದೆ ಎನ್ನುವ ವಿಶ್ವಾಸವಿದೆ ನೋಡೋಣ ಎಂದರು.