ಮುಖ್ಯಮಂತ್ರಿ ಕಾರ್ಯಕ್ರಮದ ಯಶಸ್ಸು ಸಹಿಸದ ಸಂಸದ ಪ್ರಜ್ವಲ್ ರೇವಣ್ಣರಿಂದ‌ ಸುಳ್ಳು ಆರೋಪ; ಶ್ರೇಯಸ್ ಪಟೇಲ್

ಹಣ ವಸೂಲಿ ಆರೋಪ ಸುಳ್ಳು, ಜಿಲ್ಲಾಧಿಕಾರಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ.

ಹಾಸನ: ನಗರದ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಯಶಸ್ಸು ಸಹಿಸಲಾಗದೆ ಸಂಸದ ಪ್ರಜ್ವಲ್ ರೇವಣ್ಣ ಅವರು ಜಿಲ್ಲಾಡಳಿತ ಕ್ರಷರ್ ಮಾಲೀಕರು, ಅಧಿಕಾರಿಗಳಿಂದ ಹಣ ವಸೂಲಿ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಜಿಲ್ಲೆಯ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಂದು ಲಕ್ಷ ಜನರು ಸೇರಿದ್ದನ್ನು ಸಹಿಸಲಾಗದೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಹಿಂದೆ ಸರ್ಕಾರಿ ಕಾರ್ಯಕ್ರಮಗಳನ್ನು ತಮ್ಮ ಕುಟುಂಬದ ಸಮಾರಂಭಗಳ ರೀತಿಯಲ್ಲಿ ನಡೆಸಿದವರು ಈಗ ಮಾತನಾಡುತ್ತಿದ್ದಾರೆ. ಸಂಸದರ ಕುಟುಂಬದರು ಅವರ ತೋಟ,‌ ಮನೆಗಳಿಗೆ ಹದಿನೈದು ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿಕೊಳ್ಳಲು ಯಾವ ಹಣ ಬಳಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ಯಂತ್ರ ಜನಪರವಾಗಿ ಕೆಲಸ ಮಾಡುತ್ತಿದ್ದು, ಕಾರ್ಯಕ್ರಮಕ್ಕಾಗ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಇದ್ದರು