ಶ್ರೇಯಸ್ ಪಟೇಲ್ 41 ಕೋಟಿ ರೂ. ಆಸ್ತಿ ಒಡೆಯ, ಪತ್ನಿಯೂ ಕೋಟ್ಯಧೀಶೆ

ಒಂದು ಇನ್ನೋವಾ ಕಾರು, ಟ್ರ್ಯಾಕ್ಟರ್ ಮಾಲೀಕ

ಹಾಸನ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 41 ಕೋಟಿ ರೂ. ಮೌಲ್ಯದ ಚರ-ಸ್ಥಿರ ಆಸ್ತಿಯ ಒಡೆಯರಾಗಿದ್ದು ಪತ್ನಿ ಅಕ್ಷತಾ ಹೆಸರಿನಲ್ಲೂ ಕೋಟಿ ರೂ. ಬೆಲೆ ಬಾಳುವ ಆಸ್ತಿ ಹೊಂದಿದ್ದಾರೆ.

ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಶ್ರೇಯಸ್ ಪಟೇಲ್ 1.25 ಲಕ್ಷ ನಗದು ಹೊಂದಿದ್ದು, ಪತ್ನಿ ಬಳಿ ಇದೆ 3.94 ರೂ. ಲಕ್ಷ ನಗದು , ವಿವಿಧ ಬ್ಯಾಂಕ್‌ನಲ್ಲಿ 6.23 ಲಕ್ಷ ರೂ. ಠೇವಣಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಶ್ರೇಯಸ್ ಪತ್ನಿ ತಮ್ಮ ಸ್ನೇಹಿತರು ಹಾಗೂ ಬಂಧುಗಳಿಂದ 50 ಲಕ್ಷ ರೂ. ಸಾಲ ಪಡೆದಿದ್ದು, ತಾಯಿಯಿಂದ 3.64 ಲಕ್ಷ ಹಾಗೂ ವ್ಯಕ್ತಿಯೊಬ್ಬರಿಂದ 88 ಲಕ್ಷ ಸಾಲ‌ ಪಡೆದಿದ್ದಾರೆ.

ಪತ್ನಿಗಿಂತ ಹೆಚ್ಚು ಚಿನ್ನಾಭರಣ ಹೊಂದಿರುವ ಶ್ರೇಯಸ್ ಪಟೇಲ್ ಬಳಿ ₹59. 65 ಲಕ್ಷ‌ ಬೆಲೆ ಬಾಳುವ ಚಿನ್ನಾಭರಣ, ಪತ್ನಿ ಬಳಿ 22 ಲಕ್ಷ ಬೆಲೆ ಬಾಳುವ 450 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ ಬೆಳ್ಳಿ ಇದೆ.

ಅವರು ಒಟ್ಟು 1 ಕೋಟಿ 40 ಲಕ್ಷದ 96 ಸಾವಿರದ 246 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 31 ಲಕ್ಷದ 14 ಸಾವಿರದ 917 ರೂ ಮೌಲ್ಯದ ಚರಾಸ್ತಿ ಇದೆ.

20 ಎಕರೆ ಕೃಷಿ ಭೂಮಿ ಒಡೆಯನಾಗಿರುವ ಶ್ರೇಯಸ್, ಬೆಂಗಳೂರು ಹಾಗೂ ಹೊಳೆನರಸೀಪುರದ ವಿವಿಧೆಡೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಒಟ್ಟು 39 ಕೋಟಿ 58 ಲಕ್ಷದ 6 ಸಾವಿರದ 482 ರೂ. ಮೌಲ್ಯದ ಕೃಷಿಯೇತರ ಭೂಮಿ ಹಾಗೂ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.

ಪತ್ನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ₹1.36 ಕೋಟಿ ಬೆಲೆ ಬಾಳುವ ಒಂದು ನಿವೇಶನ ಹಾಗೂ ಮನೆ ಹೊಂದಿರುವ ಶ್ರೇಯಸ್ ಪಟೇಲ್, ಒಟ್ಟು 40 ಕೋಟಿ 99 ಲಕ್ಷದ 2 ಸಾವಿರದ 728 ರೂ . ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ.

ಪತ್ನಿ ಹೆಸರಿನಲ್ಲಿ ಒಟ್ಟು 1.68 ಕೋಟಿ ಚರ ಮತ್ತು ಸ್ಥಿರಾಸ್ತಿ, ತನ್ನ ಹೆಸರಿನಲ್ಲಿ ಒಂದು ಇನ್ನೋವಾ ಕಾರು, ಒಂದು ಟ್ರ್ಯಾಕ್ಟರ್ ಹೊಂದಿರುವ ಅವರು ತಮ್ಮ ಬಳಿ ₹ 65 ಸಾವಿರದ ಮೊಬೈಲ್ ಹಾಗೂ ಪತ್ನಿ ಬಳಿ ₹ 55 ಸಾವಿರದ ಮೊಬೈಲ್ ಹೊಂದಿರುವ ಬಗ್ಗೆ ಆಸ್ತಿ ವಿವಿರದಲ್ಲಿ ಘೋಷಣೆ ಮಾಡಿದ್ದಾರೆ.