ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಗಿಂತಲೂ ಅಧಿಕ ಮತಗಳ ಮುನ್ನಡೆಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜಯಗಳಿಸಿದ್ದು, 2 ದಶಕಗಳ ಮೇಲೆ ತಮ್ಮ ತಾತ ಜಿ.ಪುಟ್ಟಸ್ವಾಮಿಗೌಡರ ನಂತರ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ಜೆಡಿಎಸ್ ತನ್ನ ತವರಿನ ಕೋಟೆಯನ್ನೇ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
2004ರ ಚುನಾವಣೆಯಲ್ಲಿ ಎಚ್.ಸಿ.ಶ್ರೀಕಂಠಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಎದುರು ಪರಾಭವಗೊಳ್ಳುವುದರೊಂದಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದ ಕಾಂಗ್ರೆಸ್, ಕ್ಷೇತ್ರವನ್ನು ಮರಳಿ ಪಡೆಯಲು ಎರಡು ದಶಕಗಳೇ ಕಳೆದಿವೆ. ಇದು ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮದ ಅಲೆ ಮೂಡಿಸಿದೆ.
ಜೆಡಿಎಸ್ ಶಾಸಕರಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗೆ ಮುನ್ನಡೆ ಪಡೆದು ಪ್ರಾಬಲ್ಯ ಮೆರೆದಿದ್ದರೆ, ಚುನಾವಣೆ ಪ್ರಚಾರದ ಮುಂಚೂಣಿಯಲ್ಲಿದ್ದ ಗೃಹಮಂಡಳಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರ ಕ್ಷೇತ್ರ ಅರಸೀಕೆರೆಯಲ್ಲಿ ಜೆಡಿಎಸ್‌ಗೆ ಆರಂಭದಿಂದಲೂ ಮುನ್ನಡೆ ದೊರಕಿತ್ತು.