ಲೋಕಸಭೆ ಚುನಾವಣೆ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ಯತೀಂದ್ರ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ಸಿದ್ದರಾಮಯ್ಯ ಮುಂದಿನ ಪ್ರಧಾನಿ ಎಂದು ಘೋಷಣೆ ಕೂಗಿದ ಅಭಿಮಾನಿಗಳು

ಹಾಸನ: ಕಾಂಗ್ರೆಸ್ ಲೋಕಸಭಾ ಚುನಾವಣೆ ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ ಎಂದು ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ, ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಭವಿಷ್ಯ ನುಡಿದರು.

ಚುನಾವಣೆಗೂ ಮೊದಲು ಐದು ಗ್ಯಾರೆಂಟಿ ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಸಿದ್ದರಾಮಯ್ಯ ಅವರು ಐದೂ ಗ್ಯಾರಂಟಿ ಜಾರಿ ಮಾಡಿದ್ದಾರೆ . ಮತ್ತೊಮ್ಮೆ ನುಡಿದಂತೆ ನಡೆಯುವುದಾಗಿ ಸಾಬೀತು ಮಾಡಿದ್ದಾರೆ ಎಂದು ತಂದೆಯನ್ನು ಕೊಂಡಾಡಿದರು.

ಬಡವರು, ಶೋಷತರಿಗಾಗಿ ಕೆಲಸ ಮಾಡುವ ಹಂಬಲ ಕಾಂಗ್ರೆಸ್‌ಗೆ ಇದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ನಿಮ್ಮ ಬೆಂಬಲ ನೀಡಬೇಕು. ಮುಂದೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ. ಹೆಚ್ಚು ಸ್ಥಾನಗಳನ್ನು ಗೆದ್ದರೆ ನೈತಿಕವಾಗಿ ಅವರಿಗೆ ಮತ್ತಷ್ಟು ಬೆಂಬಲ ಸಿಗುತ್ತೆ ಎಂದರು.

ಗ್ಯಾರೆಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣ ಖರ್ಚು ಮಾಡಿಲ್ಲ. ಹೀಗಾಗಿ ಜನರ ಬೆಂಬಲ ಬೇಕು. ಹೆಚ್ಚು ಸ್ಥಾನ ಗೆದ್ದರೆ ನಮಗೆ ಬಲ ಬರುತ್ತದೆ. ಇದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಬೇಕು ಎಂದರು.

ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯನವರ ಬಲ ಹೆಚ್ಚಲಿದ್ದು ಮುಂದಿನ ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರಿಸುತ್ತಾರೆ.

ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಲು ಸಾಧ್ಯವಾಗುತ್ತೆ. ಹಾಗಾಗಿ ನಿಮ್ಮ‌ ಬಂಬಲ ಆಶೀರ್ವಾದ ಅವರ ಮೇಲೆ ಇರಲಿ ಎಂದ ಯತೀಂದ್ರ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದರು.

ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿದ್ದ ಅಭಿಮಾನಿಗಳು ಮುಂದಿನ ಪ್ರದಾನಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.

ಸಿದ್ದರಾಮಯ್ಯ ಅವರು ಕನಕ ಜಯಂತಿ ಆಚರಣೆಗೆ ಶುರು ಮಾಡಿದರು. ಅವರು ಸಾರಿಗೆ ಸಚಿವರಾಗಿ ಅಧಿಕಾರ ಸಿಕ್ಕಿದ್ದರಿಂದ ಇದು ಸಾಧ್ಯ ಆಯ್ತು. ಒಂದು ಸಮುದಾಯ ರಾಜಕೀಯವಾಗಿ ಬೆಳೆದರೆ ಅಭಿವೃದ್ಧಿ ಸಾಧ್ಯ. ನೀವು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದರಿಂದ ಅವರು ಎರಡನೇ ಬಾರಿ ಸಿಎಂ ಆದರು ಎಂದು ಯತೀಂದ್ರ ಹೇಳಿದರು.