ಹಾಸನ: ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಪರವಾಗಿ ನಗರಸಭೆ ಸದಸ್ಯರು ಬ್ಯಾಟಿಂಗ್ ನಡೆಸಿ ಅಧಿಕಾರಿಯನ್ನು ಲೋಕಾ ವಶದಿಂದ ಬಿಡಿಸಲು ಒತ್ತಡ ಹೇರಿದ ಘಟನೆ ನಗರಸಭೆ ಆವರಣದಲ್ಲಿ ಜರುಗಿತು.
ಹಾಸನ ನಗರಸಭೆ ಎಇ ಕೆ.ಆರ್.ವೆಂಕಟೇಶ್, ಆಯುಕ್ತ ನರಸಿಂಹಮೂರ್ತಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ವೆಂಕಟೇಶ್ಪರ ಕೆಲವು ನಗರಸಭೆ ಸದಸ್ಯರು ಮಹಜರು ನಡೆಸುತ್ತಿದ್ದ ಲೋಕಾ ಪೊಲೀಸರೊಂದಿಗೆ ವಾದಕ್ಕಿಳಿದರು.
ಕೆ.ಆರ್.ವೆಂಕಟೇಶ್ ತುಂಬಾ ಒಳ್ಳೆಯವರು. ಅವರನ್ನು ಬಿಟ್ಟು ಬಿಡಿ, ಆಯುಕ್ತರನ್ನು ಕರೆದುಕೊಂಡು ಹೋಗಿ ಎಂದು ಒತ್ತಾಯಿಸಿದರು.
ಲಂಚ ಪಡೆಯುವುದರಲ್ಲಿ ವೆಂಕಟೇಶ್ ಪಾತ್ರವಿಲ್ಲ. ನಗರಸಭೆ ಆಯುಕ್ತರು ಹೇಳಿದಂತೆ ಮಾಡಿದ್ದಾರೆ. ನಗರಸಭೆ ಆಯುಕ್ತರನ್ನು ಮಾತ್ರ ಕರೆದುಕೊಂಡು ಹೋಗಿ. ಎ.ಆರ್.ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ಮುಂದೆ ಒತ್ತಡ ಹೇರಲು ಯತ್ನಿಸಿದರು.
ಇದರಿಂದ ಗರಂ ಆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು, ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ಮಾಡಿದ್ದೇವೆ. ಅಮಾಯಕ ಅಧಿಕಾರಿಗಳ ಮೇಲೆ ದಾಳಿ ಮಾಡಿಲ್ಲ. ಕೆಳಗಿನವರು ಹಿರಿಯ ಅಧಿಕಾರಿಗಳ ಮಾತು ಕೇಳುವುದನ್ನು ಮೊದಲು ಬಿಡಲಿ. ಲೋಕಾಯುಕ್ತ ನಿಯಮ, ಕಾನೂನಿನಂತೆ ದಾಳಿ ಮಾಡಿದ್ದೇವೆ ಎಂದು ಕಡ್ಡಿ ತುಂಡಾದಂತೆ ನುಡಿದರು.
ಇದರಿಂದ ಹಿಂದಡಿಯಿಟ್ಟ ನಗರಸಭೆ ಸದಸ್ಯರ ವೆಂಕಟೇಶ್ ಪರವಾಗಿ ಮಾತನಾಡುತ್ತಲೇ ಅಲ್ಲಿಂದ ಕಾಲ್ತೆಗೆದರು.