ದೇವೇಗೌಡರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಅನುಕೂಲ ಆಗಲ್ಲ ಅಂತ ಬಜೆಟ್ ನಲ್ಲಿ ಹಾಸನ ಕಡೆಗಣನೆ: ಎಚ್.ಡಿ.ರೇವಣ್ಣ ಆರೋಪ

ಸರ್ಕಾರಿ ಕಚೇರಿಗಳಲ್ಲಿ ಕಾಫಿ, ತಿಂಡಿ ತರಲು ದುಡ್ಡು ಕೊಡುತ್ತಿಲ್ಲ, ಅಂತಹ ಪರಿಸ್ಥಿತಿ ಇದೆ

ಹಾಸನ : ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ನಲ್ಲಿ ನಮ್ಮ ಹಾಸನ ಜಿಲ್ಲೆಯನ್ನು ಕಡೆಗಣಿಸಿದ್ದಾರೆ
ಎಂದು ಮಾಜಿಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿಎಂ ಅವರು ಹದಿನೈದನೇ ಬಜೆಟ್ ಮಂಡಿಸಿದ್ದಾರೆ. ರಾಜ್ಯದಲ್ಲೇ ಹಾಸನ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರಾಗಿದೆ. ವಿದೇಶಿಗರು, ಎಲ್ಲರನ್ನೂ ಆಕರ್ಷಿಸುವ ಯಾವುದಾದರೂ ಜಿಲ್ಲೆಯಿದ್ದರೆ ಅದು ಹಾಸನ ಎಂದರು.

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೈ ಬಿಟ್ಟಿದ್ದಾರೆ, ತೋಟಗಾರಿಕಾ ಕಾಲೇಜು ನೀಡಿಲ್ಲ. ಈ ಜಿಲ್ಲೆಯನ್ನು ತಾತ್ಸರ ಮಾಡಿದ್ದಾರೆ. ಇಲ್ಲಿನ ಶಾಲೆಗಳಿಗೆ ಮೂಲಸೌಕರ್ಯ ಇಲ್ಲ, ಶಿಕ್ಷಕರ ಕಾಯಂ ನೇಮಕಾತಿ ಇಲ್ಲ, ಸರ್ಕಾರಿ ಕಚೇರಿಗಳಲ್ಲಿ ಕಾಫಿ, ತಿಂಡಿ ತರಲು ದುಡ್ಡು ಕೊಡುತ್ತಿಲ್ಲ, ಅಂತಹ ಪರಿಸ್ಥಿತಿ ಇದೆ ಎಂದರು‌

ನಾವು ಏನೋ ನಿರೀಕ್ಷೆ ಮಾಡಿದ್ದೆವು, ಶಿಕ್ಷಣಕ್ಕೆ ಒತ್ತು ಕೊಡ್ತಾರೆ ಅಂದುಕೊಂಡಿದ್ದೆವು. ಆದರೆ ಗ್ರಾಮೀಣ ರಸ್ತೆಗಳು, ಪಾರ್ಕ್‌ಗಳ ಅಭಿವೃದ್ಧಿಗೆ ದುಡ್ಡು ಕೊಟ್ಟಿಲ್ಲ. ಐದು ಗ್ಯಾರೆಂಟಿಗಾಗಿ ರಾಜ್ಯದ ಜನರ ಮೇಲೆ ತೆರಿಗೆಯನ್ನು ಏರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಮೂರುಕಾಸಿನ ಯಾವುದೇ ಕೊಡುಗೆ ಇಲ್ಲ, ಇದು ಜೆಡಿಎಸ್ ಜಿಲ್ಲೆ, ಅಲ್ಲಿಗೆ ಕೊಟ್ಟರೆ ಏನು ಪ್ರಯೋಜನ ಇಲ್ಲಾ ಅಂತ ಏನೂ ಕೊಟ್ಟಿಲ್ಲ, ರೈತರು, ಬಡವರ ಬಗ್ಗೆ ಕಾಳಜಿಯೇ ಇಲ್ಲದ ಸರ್ಕಾರ ಎಂದು ಟೀಕಿಸಿದರು.