ನಮ್ಮ ಅವಧಿಯಲ್ಲೇ ಎತ್ತಿನಹೊಳೆ ಯೋಜನೆ ಪೂರ್ಣ; ಎಲ್ಲ ಕೆರೆಗಳಿಗೂ‌ ನೀರು ತುಂಬಿಸಿಯೇ ತುಂಬಿಸುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ

ಇನ್ನು ಆರು ಸಾವಿರ ಕೋಟಿ ಖರ್ಚು ಮಾಡಿದ್ರೆ ಯೋಜನೆ ಪೂರ್ಣಗೊಳ್ಳುತ್ತೆ.

ಹಾಸನ: ಎಷ್ಟೇ ದುಡ್ಡು ಖರ್ಚಾಗಲಿ ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಎಲ್ಲಾ‌ ಕೆರೆಗಳನ್ನು ತುಂಬಿಸುತ್ತೇವೆ, ಈ ಅವಧಿಯಲ್ಲಿಯೇ ಕಾಮಗಾರಿ ಮುಗಿಸಿ ಕುಡಿಯುವ ನೀರು ಕೊಟ್ಟೇ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿ ಮಾತನಾಡಿದರು.

ಇದು ಏಳು ಜಿಲ್ಲೆಗಳಿಗೆ ನೀರು ಕೊಡುವ ಮಹತ್ತರವಾದ ಯೋಜನೆ .ಈ ಯೋಜನೆ ಪ್ರಾರಂಭವಾದದ್ದು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಆಮೇಲೆ ತುಮಕೂರು, ಹಾಸನ ಸೇರಿಕೊಂಡಿತು. ಶಿವಲಿಂಗೇಗೌಡ ಅರಸೀಕೆರೆಯನ್ನು ಸೇರಿಸಿ ಎಂದು ಕೇಳಿದ.

ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಈ ಎಲ್ಲಾ ಜಿಲ್ಲೆಗಳನ್ನು ಸೇರಿಸಿ ಯೋಜನೆ ಮಾಡೋಣ ಅಂದರು. ಕೃಷ್ಣಭೈರೇಗೌಡ, ಮುನಿಯಪ್ಪ‌ ಎಲ್ಲಾ ನಮಗೆ ನೀರು ಸಿಗಲ್ಲ ಸಂಶಯ ವ್ಯಕ್ತಪಡಿಸಿದ್ದರು ಎಂದರು.

ಕೊತ್ತೂರು ಮಂಜುನಾಥ್ ನೀರು ಬಂದಿಲ್ಲ ಅಂದ. ನೀನು ಟೆಕ್ನಿಕಲ್ ಎಕ್ಸ್‌ಫರ್ಟಾ? ನಿನಗೆ ಗೊತ್ತಿದೆಯಾ? ಗುದ್ದಲಿ ಪೂಜೆ ಮಾಡಿದಾಗಿನಿಂದ ಟೀಕೆ ಮಾಡಿದ್ದೇ ಮಾಡಿದ್ದು. ಯಾರು ಟೀಕೆ ಮಾಡಿದ್ದು? ಬಿಜೆಪಿ-ಜೆಡಿಎಸ್‌ನವರು ಎಂದು ಹರಿಹಾಯ್ದರು.

ಇನ್ನು ಆರು ಸಾವಿರ ಕೋಟಿ ಖರ್ಚು ಮಾಡಿದ್ರೆ ಯೋಜನೆ ಪೂರ್ಣಗೊಳ್ಳುತ್ತೆ. ನಮ್ಮ ಕಾಲದಲ್ಲೇ ಈ ಯೋಜನೆ ಪೂರ್ಣ ಮಾಡ್ತಿವಿ. ನಾನು, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಬಹಳ ಬೈಯಿಸಿಕೊಂಡಿದ್ದೇವೆ. ಬಿಜೆಪಿಯವರ ಕಾಲದಲ್ಲಿ ಏನೂ ಮಾಡಲಿಲ್ಲ. ನಾಲ್ಕು ವರ್ಷ ಈ ಯೋಜನೆಗೆ ಏನೂ ಖರ್ಚು ಮಾಡಲಿಲ್ಲ. ಮಾಡಿದ್ದರೆ ಈ ಯೋಜನೆ ಮುಗಿದು ಹೋಗಿರೋದು ಎಂದರು.

ಈ ಯೋಜನೆಯಿಂದ ಯಾವ ಜಿಲ್ಲೆಗಳಿಗೆ ಕುಡಿಯಲು, ಕೆರೆಗೆ ನೀರು ಕೊಡ್ತಿವಿ ಅಂತಾ ಹೇಳಿದ್ದೆವೋ ಅದನ್ನು ಮಾಡೇ ಮಾಡುತ್ತೇವೆ. ಟೀಕೆಗಳು ಸಾಯ್ತವೆ ಕೆಲಸಗಳು ಉಳಿಯುತ್ತವೆ ಎಂಬ ಮಾತನ್ನು ಡಿ.ಕೆ.ಶಿವಕುಮಾರ್ ಹೇಳುತ್ತಿರುತ್ತಾರೆ ಎಂದರು.

ಈ‌ ನಾಡಿನ ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಆರ್ಥಿಕ, ಸಾಮಾಜಿಕವಾಗಿ ತೊಂದರೆ ಅನುಭವಿಸಬಾರದು. ಅದಕ್ಕಾಗಿ ಏನು ಮಾಡಬೇಕು ಮಾಡೇ ತೀರುತ್ತೇವೆ ಇದು ನಮ್ಮ ಬದ್ದತೆ ಎಂದರು.

ಪಾಪ ಡಿ.ಕೆ.ಶಿವಕುಮಾರ್ ನಿನ್ನೆ ಬಂದು ಪೂಜೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅತ್ಯಂತ ಶಾಸ್ತ್ರೋಸ್ತಕವಾಗಿ ಕಾರ್ಯಕ್ರಮ ಮಾಡಿದ್ದಾರೆ. ನನಗೂ ಈ ಯೋಜನೆ ಉದ್ಘಾಟನೆ ಮಾಡಿದ್ದು ಸಂತೋಷವಾಗಿದೆ ಎಂದರು.