ಹಾಸನ: ನಾವು ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಜಿಲ್ಲೆಗೆ ಯೋಜನೆಗಳನ್ನು ಕೊಟ್ಟಿರುವುದು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಅವಧಿಯಲ್ಲಿಯೇ ಹೊರತು ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನಾವು ಮಾಡಿರುವ ಕೆಲಸಗಳ ಉದ್ಘಾಟನೆ ಮಾಡುತ್ತಾರೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳಿಗೆ ಇಷ್ಟಿಷ್ಟು ಜನ ಕರೆದುಕೊಂಡು ಬರಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ಅವಧಿಯಲ್ಲಿ ನಿರ್ಮಾಣವಾಗಿ ಈಗಾಗಲೇ ಜನರಿಗೆ ಸೇವೆ ನೀಡುತ್ತಿರುವ ಕಟ್ಟಡಗಳು ಈಗ ಎರಡೆರಡು ಸಾರಿ ಉದ್ಘಾಟನೆ ಆಗುತ್ತಿವೆ. ನಮ್ಮೂರಿನ ದನಗಳ ಆಸ್ಪತ್ರೆ ಉದ್ಘಾಟನೆ ಆಗಿ ಒಂದು ವರ್ಷ ಆಗಿದೆ. ಅದನ್ನೂ ಉದ್ಘಾಟನೆ ಮಾಡೋಣ ಅಂತ ಡಿಸಿಯವರು ಹೇಳುತ್ತಿದ್ದಾರೆ. ಯಾವ್ಯಾವುದು ಉದ್ಘಾಟನೆ ಆಗಿದೆಯೋ ಅವುಗಳನ್ನು ಮತ್ತೆ ಉದ್ಘಾಟನೆ ಮಾಡಿಸುತ್ತಿದ್ದಾರೆ ಡಿಸಿಯವರಿಗೆ ಅದೇ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಸೀಕೆರೆ ಕ್ಷೇತ್ರಕ್ಕೆ ದೇವೇಗೌಡರು, ಕುಮಾರಣ್ಣ ಅವರೇ ಕೊಡುಗೆ ಕೊಟ್ಟಿರುವುದು, ಜೆಡಿಎಸ್ ಅಧಿಕಾರದಲ್ಲಿದ್ದಾಗ ಇಂಜಿನಿಯರ್ ಕಾಲೇಜು, ರಸ್ತೆಗಳನ್ನು ಮಾಡಿದ್ದೆವು, ಆದರೆ ಈಗ ಅಧಿಕಾರಿಗಳು ಜನ ಕರೆದುಕೊಂಡು ಬರುವ ಕೆಲಸಕ್ಕೆ ಇಳಿದಿದ್ದಾರೆ. ರೈತರ ಕೆಲಸ ಯಾರೂ ಮಾಡುತ್ತಿಲ್ಲ, ಕೃಷಿಕರು ಸಾಯುತ್ತಿದ್ದಾರೆ. ಈ ಸರ್ಕಾರ ಜಿಲ್ಲೆಗೆ ಯಾವ ಹೊಸ ಕಾಮಗಾರಿ ನೀಡಿದೆ? ಅರಸೀಕೆರೆಗೆ ಒಂದೆರಡು ಕೆಲಸ ಮಾಡಿಕೊಟ್ಟಿದ್ದಾರೆ ಎನ್ನುವುದನ್ನು ಬಿಟ್ಟರೆ ಜಿಲ್ಲಾಧಿಕಾರಿಗಾಗಲಿ, ಮುಖ್ಯ ಕಾರ್ಯದರ್ಶಿಗಾಗಲೀ ಜಿಲ್ಲೆಯ ರೈತರ ಬಗ್ಗೆ ಯಾರಿಗೂ ಚಿಂತೆ ಇಲ್ಲ. ಇಲ್ಲಿ ಕುಡಿಯುವ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ, ನೀರಿಗೆ ಹಾಹಾಕಾರ ಎದುರಾಗಿದೆ. ರೈತರ ಬೆಳೆ ನಷ್ಟಕ್ಕೆ ಪರಿಹಾರ ಇಲ್ಲವಾಗಿದೆ ಎಂದು ಆರೋಪಿಸಿದರು.
ಎಂಟು ತಿಂಗಳ ಕಾಲ ರಾಜ್ಯ ಸರ್ಕಾರಕ್ಕೆ ಕೊಬ್ಬರಿಗೆ ಬೆಂಬಲ ಬೆಲೆ ಕೊಡಲು ಆಗಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕ್ವಿಂಟಾಲ್‌ಗೆ ಹದಿನೈದು ಸಾವಿರ ರೂ. ಕೊಡ್ತಿನಿ ಅಂದರು. ಈ ರಾಜ್ಯದ ಜನತೆಗೆ ದ್ರೋಹ ಬಗೆದಿರುವ ಸರ್ಕಾರ ಏನಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ದೇವೇಗೌಡರು ಹೋಗಿ ಕೇಂದ್ರದಲ್ಲಿ ಮೋದಿಯವರನ್ನು ಭೇಟಿ ಮಾಡಿದರು ಅದರ ಪರಿಣಾಮವಾಗಿ ಕೊಬ್ಬರಿ ಖರೀದಿ ಮಾಡುತ್ತಿದ್ದಾರೆ. ಜಿಲ್ಲೆಯ ಜನ ಮೋದಿ, ಮುಂಡಾ, ದೇವೇಗೌಡರು, ಸಂಸದರು, ಶಾಸಕರಿಗೆ ಧನ್ಯವಾದ ಹೇಳಬೇಕು ಎಂದರು.