ಹಾಸನ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು

ಚನ್ನರಾಯಪಟ್ಟಣ:  ತಾಲ್ಲೂಕಿನ ಎಂ.ದಾಸಪುರ ಗ್ರಾಮದಲ್ಲಿ ಮರುನಹಳ್ಳಿ ಗ್ರಾಮದ ವಿದ್ಯಾರ್ಥಿ ಕಿರಣ್ (14) ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಮೃತಪಟ್ಟ ಕಿರಣ್

ಮರುವನಹಳ್ಳಿ ಗ್ರಾಮದ ಸೋಮಶೇಖರ್-ಮಣಿ ದಂಪತಿಯ ಪುತ್ರನಾದ ಕಿರಣ್, ಎಂ.ದಾಸಪುರ ಗ್ರಾಮದ ನಿರ್ಮಲ ವಿದ್ಯಾಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ. ಮಧ್ಯಾಹ್ನ ತನ್ನ ಮೂವರು ಸ್ನೇಹಿತರೊಂದಿಗೆ ಗ್ರಾಮದ ಬಳಿಯಿರುವ ಕಟ್ಟೆಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕಟ್ಟೆಯಲ್ಲಿ ಆಳವಾದ ಗುಂಡಿಯಿರುವುದನ್ನು ಗಮನಿಸದೆ ನೀರಿಗೆ ಇಳಿದ ಕಿರಣ್ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಾನೆ. ಅದೃಷ್ಟವಶಾತ್, ಉಳಿದ ಮೂವರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ, ಅಗ್ನಿಶಾಮಕದಳ ಸಿಬ್ಬಂದಿ ಕಿರಣ್‌ನ ಮೃತದೇಹವನ್ನು ಶೋಧಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.