ದರ್ಶನ್ ಗೆ ಕನ್ನಡ ಚಿತ್ರರಂಗದ ಸೇವೆ ಮಾಡಲು ಶಕ್ತಿ ದೊರೆಯಲಿ; ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್

ಹಾಸನ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಹಾಗೂ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಇಂದು ಹಾಸನಾಂಬೆ ದೇವಿ ದರ್ಶನ ಪಡೆದರು.

ದೇವಿ ದರ್ಶನದ ಬಳಿಕ ಮಾತನಾಡಿದ ಎಂ.ಎನ್.ಸುರೇಶ್, ಇಂತಹ ಪವಿತ್ರವಾದ ಸ್ಥಳದಲ್ಲಿ ಹಾಸನಾಂಬೆ ತಾಯಿ ದರ್ಶನ ಆಗಿದ್ದು ಸಂತೋಷ ಆಗಿದೆ. ನನ್ನ ಜೀವನದಲ್ಲಿ ಹಾಸನಾಂಬೆ ನೋಡಲು ಆಗಿರಲಿಲ್ಲ. ಇದೇ ಮೊದಲ ಬಾರಿಗೆ ದರ್ಶನ ಮಾಡಿದ್ದೇನೆ. ನಮ್ಮ ಚಿತ್ರರಂಗಕ್ಕೆ ಒಳ್ಳೆಯದಾಗಲಿ, ನಮ್ಮ ಕನ್ನಡ ಚಿತ್ರರಂಗ ಬೆಳೆಯಲಿ ಎಂದು ಕೇಳಿ ಕೊಂಡಿದ್ದೇನೆ ಎಂದರು.

ದರ್ಶನ್‌ಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮನುಷ್ಯರು ತಪ್ಪು, ನೆಪ್ಪುಗಳನ್ನು ಮಾಡುತ್ತಾರೆ. ಅದನ್ನು ಕ್ಷಮಿಸುವುದು ಭಗವಂತನ ಇಚ್ಛೆ. ಆ ತಾಯಿ ಹಾಸನಾಂಬೆ ಅವರಿಗೆ ಒಳ್ಳೆಯದನ್ನು ಕೊಡಲಿ. ಮುಂದಿನ ದಿನಗಳಲ್ಲಿ ದರ್ಶನ್ ಕನ್ನಡ ಚಿತ್ರರಂಗಕ್ಕೆ ಸೇವೆ ಮಾಡಲು ಅನುಕೂಲ, ಶಕ್ತಿ ಕೊಡಲಿ ಎಂದು ನಾವು ಕೇಳಿಕೊಳ್ಳುತ್ತೇವೆ ಎಂದರು.

ನಾವು ಹಾಸನಾಂಬೆ ದೇವಾಲಯಕ್ಕೆ ಬಂದಾಗ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ ಆದೇಶ ಮಾಡಿದೆ. ಆಪರೇಷನ್‌ಗಾಗಿ ಅವರು ಹೊರಗೆ ಬರುತ್ತಿದ್ದಾರೆ. ಶೀಘ್ರ ಗುಣಮುಖರಾಗಲಿ.ಲ, ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಸಾ.ರಾ.ಗೋವಿಂದ್ ಮಾತನಾಡಿ, ಈ ನಾಡಿಗೆ, ದೇಶಕ್ಕೆ, ಎಲ್ಲರಿಗೂ ಆ ತಾಯಿ ಆಶೀರ್ವಾದ ಮಾಡಲಿ, ನಾನು ಹಾಸನದಲ್ಲೇ ಓದಿ ಬೆಳೆದವನು ಆದರೂ ತಾಯಿ ದರ್ಶನ ಮಾಡಲು ಆಗಿರಲಿಲ್ಲ. ಇವತ್ತು ಆ ತಾಯಿ ದರ್ಶನ ಮಾಡಿದ್ದೇನೆ. ಎಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ ಎಂದರು.

ದರ್ಶನ್‌ಗೆ ಜಾಮೀನು ಸಿಕ್ಕಿದೆ. ನಾವೆಲ್ಲರೂ ಕೂಡ ನ್ಯಾಯಾಂಗವನ್ನು ನಂಬಿ ನಡೆಯುತ್ತಿರುವವರು. ಸಂವಿಧಾನವನ್ನು ನೋಡಿ ಬದುಕಿರುವವರು.
ಇವತ್ತು ನ್ಯಾಯಾಲಯ ದರ್ಶನ್ ಅವರಿಗೆ ಜಾಮೀನು ಕೊಟ್ಟಿದೆ. ಅದಕ್ಕೆ ನಾವೆಲ್ಲರೂ ಕೂಡ ಖುಷಿ ಪಡುತ್ತೇವೆ. ಒಳ್ಳೆಯದಾಗಲಿ, ಪಾಪ ಅವರಿಗೆ ಆರೋಗ್ಯ ಸರಿಯಿಲ್ಲ. ಆರೋಗ್ಯ ಸುಧಾರಣೆ ಆಗಬೇಕು ಎಂಬ ದೃಷ್ಟಿ ಇಟ್ಟುಕೊಂಡು ಇವತ್ತು ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

ವಿಶೇಷವಾಗಿ ನ್ಯಾಯಾಲಯ ಹೇಳುವುದನ್ನು ಕೇಳಲೇಬೇಕು, ಪಾಲಿಸಲೇಬೇಕು ಅದು ಆಗಿದೆ.
ಮುಂದಿನ ದಿನಗಳಲ್ಲಿ ಇನ್ನೊಂದು ಸುತ್ತು ನ್ಯಾಯಾಲಯ ಏನು ಹೇಳುತ್ತೆ ಅದನ್ನು ಕೇಳಬೇಕು ಎಂದರು.